ಇಂಡಿಯಾ ಮೈತ್ರಿಕೂಟದೊಳಗಿನ ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತಿಮವಾಗಿಲ್ಲ. ಇದನ್ನು ಬಗೆಹರಿಸಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.
“ಕಾಂಗ್ರೆಸ್ ಪಕ್ಷದ ತಂಡವು ಮೊದಲು ಆಂತರಿಕ ಚರ್ಚೆಗಳನ್ನು ನಡೆಸುತ್ತದೆ. ನಂತರ ಮೈತ್ರಿ ಸದಸ್ಯರೊಂದಿಗೆ ಬೇಡಿಕೆಗಳನ್ನು ಇಡುತ್ತದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ (ಜನವರಿ 6) ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್‌ನ ಸದಸ್ಯರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಲಾಗುತ್ತಿದೆ” ಎಂದಿದ್ದಾರೆ.
ಡಿಸೆಂಬರ್ 19 ರಂದು ಕಾಂಗ್ರೆಸ್ ಪಕ್ಷವು ತನ್ನ ರಾಷ್ಟ್ರೀಯ ಮೈತ್ರಿ ಸಮಿತಿಯನ್ನು ಘೋಷಿಸಿತು. ಇದರಲ್ಲಿ ಮುಕುಲ್ ವಾಸ್ನಿಕ್ ಸಂಚಾಲಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಾಘೇಲ್, ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್, ಮೋಹನ್ ಪ್ರಕಾಶ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
“ನಮ್ಮ ತಂಡವು ಮೊದಲು ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರೊಂದಿಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೊಂದಿಗೆ, ಪ್ರತಿ ರಾಜ್ಯದ ಹಿರಿಯ ನಾಯಕರ ಜೊತೆಯಲ್ಲಿ ಮತ್ತು ನಮ್ಮ ಕಾಂಗ್ರೆಸ್ ಸದಸ್ಯರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಲಿದೆ” ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
“ಬಳಿಕ ಇಂಡಿಯಾ ಮೈತ್ರಿಕೂಟದ ಪಾಲುದಾರರೊಂದಿಗೆ ಚರ್ಚೆ ನಡೆಸಲಾಗುವುದು. ಯಾರಿಗೆ ಯಾವ ಸೀಟ್ ಬೇಕು, ನಮಗೆ ಎಲ್ಲಿಲ್ಲಿ ಬಿಟ್ಟುಕೊಡಬೇಕು ಎಂಬ ಲೆಕ್ಕಾಚಾರಗಳನ್ನು ಚರ್ಚಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 19 ರಂದು ನವದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಕೊನೆಯ ಸಭೆಯಲ್ಲಿ ಸೀಟು ಹಂಚಿಕೆಯ ಪ್ರಸ್ತಾಪವಾಗಿತ್ತು. ಬಿಜೆಪಿ ವಿರುದ್ಧ ಸಾಮೂಹಿಕ ಹೋರಾಟ ನಡೆಸಲು ಸಾಧ್ಯವಾದಷ್ಟು ಬೇಗ ಸೀಟು ಹಂಚಿಕೆ ಸೂತ್ರ ಆಗಬೇಕು ಎಂದು ಬಹುತೇಕ ಎಲ್ಲಾ ನಾಯಕರು ಒತ್ತಿ ಹೇಳಿದರು.
ಸೀಟು ಹಂಚಿಕೆ ಕುರಿತು ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ, ಸೀಟು ಹಂಚಿಕೆಯನ್ನು ಸಾಧ್ಯವಾದಷ್ಟು ಬೇಗ ಅಂತಿಮಗೊಳಿಸಬೇಕಾಗಿದೆ ಎಂದು ಎಲ್ಲಾ ನಾಯಕರು ಒಪ್ಪಿಕೊಂಡಿದ್ದಾರೆ ಎಂದಿದ್ದರು.
ಆದರೆ ಆ ಸಭೆ ನಡೆದು ಎರಡು ವಾರಗಳು ಕಳೆದರೂ, ಯಾವುದೇ ರಾಜ್ಯದಲ್ಲಿ ಸೀಟು ಹಂಚಿಕೆ ವ್ಯವಸ್ಥೆ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಡಿಸೆಂಬರ್ 19 ರ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಅವರ ನಾಯಕತ್ವವನ್ನು ಪ್ರಸ್ತಾಪಿಸಿದ್ದರು. ದಲಿತ ಸಮುದಾಯದ ನಾಯಕರೂ ಆಗಿರುವ ಖರ್ಗೆಯವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಚರ್ಚೆ ಮುನ್ನಲೆಗೆ ಬಂದಿವೆ. ಅರವಿಂದ್ ಕೇಜ್ರಿವಾಲ್ ಅವರು ಖರ್ಗೆಯವರ ನಾಯಕತ್ವವನ್ನು ಬೆಂಬಲಿಸಿದ್ದಾರೆ.
ಮುಂದಿನ 10-15 ದಿನಗಳಲ್ಲಿ ಹುದ್ದೆಗಳ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಖರ್ಗೆ ಹೇಳಿದ್ದರು.
“ಇದು ಕೌನ್ ಬನೇಗಾ ಕರೋಡ್ಪತಿ ಅಲ್ಲ. ಯಾರು ಯಾವ ಹುದ್ದೆಯನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ 10-15 ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನೂ ಓದಿರಿ: ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ: ಆರ್ ಅಶೋಕ್ ಟೀಕೆ