ಬ್ಯಾಂಕ್ ಸಾಲ ಮರುಪಾವತಿ ಮಾಡದೆ, ವಂಚಿಸುವ ಉದ್ದೇಶ ಹೊಂದಿದ್ದಾರೆಂಬ ಆರೋಪದ ಮೇಲೆ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಖಲಾಗಿದೆ.
ಬೆಳಗಾವಿಯ ಸೌಭಾಗ್ಯ, ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರಾಗಿದ್ದ ರಮೇಶ್ ಜಾರಕಿಹೊಳಿ, ನಿರ್ದೇಶಕ ವಸಂತ್ ವಿ ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಎ ಪಾವಡೆ ವಿರುದ್ಧ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ಮ್ಯಾನೇಜರ್ ರಾಜಣ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಮೂವರು ಆರೋಪಿಗಳು ಸಕ್ಕರೆ ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ವಿಧಿಸಿದ್ದ ಎಲ್ಲ ಷರತ್ತುಗಳಿಗೆ ಆರೋಪಿಗಳು ಒಪ್ಪಿಗೆಯನ್ನೂ ನೀಡಿದ್ದರು” ಎಂದು ದೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ವಿವರಿಸಿದ್ದಾರೆ.
“ವಿವಿಧ ಷರತ್ತುಗಳ ಮೇಲೆ ಅವರಿಗೆ ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಅದರ ಸಮೂಹ ಬ್ಯಾಂಕ್ಗಳಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತುಮಕೂರು ಜಿಲಾ ಕೇಂದ್ರ ಸಹಕಾರ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ನೀಡಲಾಗಿದೆ. 2013ರ ಡಿಸೆಂಬರ್ 7ರಿಂದ 2017ರ ಮಾರ್ಚ್ 31ರ ವರೆಗೆ ಹಂತ ಹಂತವಾಗಿ 232.88 ಕೋಟಿ. ರೂ. ಸಾಲ ಪಡೆದಿದ್ದಾರೆ. ಆದರೆ, ಆರೋಪಿಗಳು ಸಾಲವನ್ನು ಮರುಪಾವತಿಸಿಲ್ಲ. ಇದೂವರೆಗೆ, 439.7 ಕೋಟಿ ರೂ. ಸಾಲ ಪಾವತಿ ಬಾಕಿ ಉಳಿದಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಅತಿಥಿ ಉಪನ್ಯಾಸಕರ ಗೌರವಧನ 5ರಿಂದ 8 ಸಾವಿರ ಹೆಚ್ಚಳಕ್ಕೆ ಸಿಎಂ ಸಮ್ಮತಿ
“ಸಾಲ ಪಡೆಯುವ ವೇಳೆ ಆರೋಪಿಗಳು ಸೌಭಾಗ್ಯ, ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದರು. ಆದರೆ, ಸಾಲ ಪಡೆದ ಬಳಿಕ ಕಂಪನಿಯ ಜವಾಬ್ದಾರಿಯಿಂದ ಹೊರಬಂದಿದ್ದಾರೆ. ತಮ್ಮ ಸ್ಥಾನಗಳಿಗೆ ಬೇರೆಯವರನ್ನು ನೇಮಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ಷರತ್ತಿನ ಪ್ರಕಾರ, ಸಾಲವನ್ನು ಮಂಜೂರು ಮಾಡುವ ಸಮಯದಿಂದ ಸಾಲ ಮರುಪಾವತಿಯಾಗುವವರೆಗೆ ಬ್ಯಾಂಕ್ನ ಅನುಮತಿ ಇಲ್ಲದೇ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಿಸುವಂತಿಲ್ಲ. ಆದರೆ, ಅವರು ನಿಯಮ ಬಾಹಿರವಾಗಿ ಅಧಿಕಾರಿಗಳನ್ನು ಬದಲಿಸಿದ್ದಾರೆ” ಎಂದು ದೂರಿದ್ದಾರೆ.
“ಆರೋಪಿಗಳು ಬ್ಯಾಂಕ್‌ಗೆ ಸಾಲದ ಹಣವನ್ನು ಮರುಪಾವತಿ ಮಾಡದೆ, ಮೋಸ ಮಾಡಬೇಕೆಂಬ ಉದ್ದೇಶದಿಂದ ಬ್ಯಾಂಕ್‌ಗೆ ಗಮನಕ್ಕೆ ತಾರದೇ, ಕಂಪನಿಯ ಆಡಳಿತ ಮಂಡಳಿಯಿಂದ ಹೊರಬಂದಿದ್ದಾರೆ. ಬ್ಯಾಂಕ್‌ಗೆ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.