ಬೆಂಗಳೂರಿನ ಚಿತ್ರಸಂತೆಗೆ ಇನ್ನು ಮುಂದೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಇಂದು 21ನೇ ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದ ಅವರು, 1,500ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ. 24 ರಾಜ್ಯದ ಕಲಾವಿದರಿಗೆ ನನ್ನ ಕಡೆಯಿಂದ ಅಭಿನಂದನೆ. ಇನ್ಮುಂದೆ ಚಿತ್ರಸಂತೆಗೆ ಸರ್ಕಾರದಿಂದ 50 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು.
“ಅತ್ಯಂತ ಸಂತೋಷದಿಂದ ಚಿತ್ರಸಂತೆಯನ್ನ ಉದ್ಘಾಟನೆ ಮಾಡಿದ್ದೇನೆ. 3 ರಿಂದ 4 ಲಕ್ಷ ಜನರು ಬರುತ್ತಾರೆ. ಬಿ ಎಲ್ ಶಂಕರ್ ಅವರು ಅರ್ಟ್ ಗ್ಯಾಲರಿ ಬಗ್ಗೆ ಹೇಳಿದ್ದಾರೆ. ನಮ್ಮ ಸರ್ಕಾರ ಅದಕ್ಕೆ ಬೆಂಬಲಿಸಲಿದೆ. ನಮ್ಮ ಸರ್ಕಾರ ತೆರೆದ ಮನಸ್ಸಿನಲ್ಲಿದೆ. ಎಲ್ಲ ರೀತಿಯ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ” ಎಂದು ಸಿಎಂ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್ ಮಾತನಾಡಿ, ಇಂದಿನ ಚಿತ್ರಸಂತೆಯನ್ನು ಇಸ್ರೋ ವಿಜ್ಞಾನಿಗಳಿಗೆ ಅರ್ಪಿಸಿದ್ದೇವೆ. ಈ ಬಾರಿ ಚಿತ್ರಸಂತೆಯಲ್ಲಿ 1680 ಕಲಾವಿದರು ಭಾಗಿಯಾಗಿದ್ದಾರೆ. 205 ವಿಶೇಷಚೇತನರು, ಹಿರಿಯ ಕಲಾವಿದರು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಸಿ. ಸುಧಾಕರ್, ಶಾಸಕರಾದ ಅಜಯ್ ಸಿಂಗ್, ರಿಜ್ವಾನ್ ಅರ್ಷದ್ ಸೇರಿ ಹಲವರು ಭಾಗಿಯಾಗಿದ್ದರು.
ಕಲಾವಿದರಿಂದ ನೇರವಾಗಿ ಮಾರಾಟ
ಈ ಬಾರಿಯ ಚಿತ್ರಸಂತೆಯನ್ನು ಶಿವನಂದ ಸರ್ಕಲ್ನಿಂದ ಸ್ಟೀಲ್ ಬ್ರಿಡ್ಜ್ ಕೆಳಗಿನವರೆಗೆ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಚಿತ್ರಸಂತೆಯಲ್ಲಿ 100 ರೂ.ದಿಂದ ಆರಂಭವಾಗಿ ಲಕ್ಷದವರೆಗೂ ಚಿತ್ರಕಲೆಗಳು ಮಾರಾಟಕ್ಕೆ ಇರಲಿವೆ. ಮೈಸೂರು ಶೈಲಿಯ ಕಲೆ, ತಂಜಾವೂರಿನ ಶೈಲಿ, ರಾಜಾಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ಚಿತ್ರಗಳನ್ನು ಬಿಡಸಲಾಗುತ್ತದೆ. ಅಲ್ಲದೇ ಆಕ್ರಿಕಲ್ , ಕೊಲಾಜ್, ಲಿಯೋಗ್ರಾಫ್, ಡೂಡಲ್ ಎಂಬೋಸಿಂಗ್, ವಿಡಿಯೋ ಕಲೆ, ಗ್ರಾಫಿಕ್ ಕಲೆ , ಶಿಲ್ಪ ಕಲೆ, ಸೇರಿದಂತೆ ಹಲವು ರೀತಿಯ ಕಲೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.