ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸದ್ಯ ದೇಶಾದ್ಯಂತ ಪರ-ವಿರೋಧ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಅಂದು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸೂಚನೆ ನೀಡಿದ್ದೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮಗೆ ಕೇಂದ್ರದಿಂದ ಯಾವ ಸೂಚನೆಯೂ ಬಂದಿಲ್ಲ. ನಾವೇ ನಿರ್ಧಾರ ತೆಗೆದುಕೊಂಡಿದ್ದೇವೆ. ಬಿಜೆಪಿಯವರ ಥರ ನಾವು ನಾಗಪುರದ ಸೂಚನೆಗೆ ಕಾಯುವುದಿಲ್ಲ. ನಾವು ಕೂಡ ಹಿಂದೂಗಳೇ. ಯಾವ ಸಮಯದಲ್ಲಿ ಪೂಜೆ ಮಾಡಬೇಕು ಅಂತ ತಿಳಿಸುತ್ತೇವೆ” ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದ್ದಾರೆ.
“ಶ್ರೀರಾಮ ಆದರ್ಶ ಪುರುಷ. ನಮ್ಮ ದೇಶದಲ್ಲಿ ಲಕ್ಷಗಟ್ಟಲೇ ದೇವಾಲಯಗಳು ಇವೆ. ಶ್ರೀರಾಮನದ್ದು ಸಾವಿರಾರು ವರ್ಷಗಳ ಇತಿಹಾಸ. ಶ್ರೀರಾಮ ನಡೆದುಕೊಂಡ ರೀತಿ ನೋಡಿ ಅವರನ್ನು ಪೂಜಿಸುತ್ತಾರೆ. ಮುಜರಾಯಿ ಇಲಾಖೆ ವತಿಯಿಂದ ಪೂಜೆ ಮಾಡಲು ನಿರ್ಧಾರ ಮಾಡಲಾಗಿದೆ” ಎಂದು ಹೇಳಿದರು.
#WATCH | Bengaluru: Karnataka Minister Ramalinga Reddy says, “A circular has been issued to 34,000 temples to organise a special pooja on January 22 (on the occasion of Ram Temple consecration in Ayodhya)…” pic.twitter.com/OpPiAIOTf4
— ANI (@ANI) January 7, 2024
“ಸಂಕ್ರಾಂತಿ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲೂ ಕೂಡ ವಿಶೇಷ ಪೂಜೆ ಮಾಡಲು ಹೇಳಲಾಗಿದೆ. ರಾಮನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹೊಸ ದೇವಸ್ಥಾನದ ಕಾರ್ಯಕ್ರಮ ಯಶಸ್ವಿ ಆಗಲಿ. ಕಾಂಗ್ರೆಸ್ನವರು ನಿಜವಾದ ಹಿಂದೂಳಾಗಿದ್ದು, ಹಿಂದು ಧರ್ಮ ಪಾಲಿಸುತ್ತಾರೆ. ನಾವು ಎಂದೂ ಕೂಡ ಇದರ ಮೇಲೆ ರಾಜಕೀಯ ಮಾಡಿಲ್ಲ” ಎಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದರು.
“ಶ್ರೀಕಾಂತ್ ಪೂಜಾರಿಯನ್ನು ಬಿಜೆಪಿಯವರು ಕರಸೇವಕರು ಅನ್ನುತ್ತಿದ್ದಾರೆ. ಕರಸೇವಕನ ವಿರುದ್ಧ 16 ಪ್ರಕರಣಗಳಿವೆ. ಕಾನೂನು ಉಲ್ಲಂಘನೆ ಮಾಡಿ ಏನು ಬೇಕಾದ್ರೂ ಮಾಡಬಹುದಾ” ಎಂದು ಪ್ರಶ್ನಿಸಿದ ಸಚಿವ ರಾಮಲಿಂಗಾರೆಡ್ಡಿ, “ನಾವು ವಿಪಕ್ಷದಲ್ಲಿ ಇದ್ದಾಗ ನಮ್ಮ ಮೇಲೂ ಪ್ರಕರಣ ದಾಖಲಾಗಿತ್ತು. ನಮ್ಮ ಎಲ್ಲಾ ಮುಖಂಡರ ಮೇಲೆಯೂ ಪ್ರಕರಣಗಳಿವೆ. ಬಿಜೆಪಿಗರಿಗೆ ಕಾನೂನಿನ ಅರಿವು ಇಲ್ಲವಾ? ಎಂದು ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.
“ತುಷ್ಟೀಕರಣದ ವಿರುದ್ಧ ಹಿಂದುತ್ವದ ದಿಗ್ವಿಜಯ” ಎಂದ ವಿಪಕ್ಷ ನಾಯಕ ಅಶೋಕ್
ಮುಜರಾಯಿ ಇಲಾಖೆಯ ಆದೇಶದ ಪ್ರತಿಯನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, “ಕಡೆಗೂ ರಾಮಭಕ್ತಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದೆ” ಎಂದಿದ್ದಾರೆ.
ಕಡೆಗೂ ರಾಮಭಕ್ತಿಗೆ ಶರಣಾದ ಕಾಂಗ್ರೆಸ್ ಸರ್ಕಾರ
ಆಯೋಧ್ಯೆಯ ನವ್ಯ, ಭವ್ಯ ಶ್ರೀರಾಮ ಮಂದಿರದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸುದಿನ, ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಇದು ರಾಮಭಕ್ತರ, ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ. ತುಷ್ಟೀಕರಣದ… pic.twitter.com/A5ikzx2ZUl
— R. Ashoka (ಆರ್. ಅಶೋಕ) (@RAshokaBJP) January 7, 2024
“ಕಡೆಗೂ ರಾಮಭಕ್ತಿಗೆ ಶರಣಾದ ಕಾಂಗ್ರೆಸ್ ಸರ್ಕಾರ. ಅಯೋಧ್ಯೆಯ ನವ್ಯ, ಭವ್ಯ ಶ್ರೀರಾಮ ಮಂದಿರದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸುದಿನವಾದ ಜ. 22ರಂದು ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದು ರಾಮಭಕ್ತರ, ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ. ತುಷ್ಟೀಕರಣದ ವಿರುದ್ಧ ಹಿಂದುತ್ವದ ದಿಗ್ವಿಜಯ” ಎಂದು ಬರೆದುಕೊಂಡಿದ್ದಾರೆ.