ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಹಾಗೂ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಜಗಳೂರು ಪಟ್ಟಣದ ತಾಲೂಕು ಕಚೇರಿ ಮುಂಬಾಗ ಜಮಾಯಿಸಿದ ದಸಂಸ ಕಾರ್ಯಕರ್ತರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ, “ದಲಿತ ಕುಟುಂಬದ ಹನುಮಂತಪ್ಪನವರ ಮೂಕಪ್ರಾಣಿಗಳನ್ನು ರಾಮೇಗೌಡನ ಜಮೀನಿನಲ್ಲಿ ಮೇಯಿಸಿದ ಕಾರಣಕ್ಕೆ ಹನುಮಂತಪ್ಪ ಅವರಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಲ್ಲದೆ, ಸಹೋದರ ರೆಡ್ಡೆಪ್ಪ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಜತೆಗೆ ಅವರು ವಾಸವಾಗಿದ್ದ ಗುಡಿಸಲಿಗೆ ಬೆಂಕಿ ಹಚ್ಚಿರುವುದು ಖಂಡನೀಯ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದಲಿತ ವಿರೋಧಿ ನೀತಿ ಕಾಣುತ್ತಿದೆ. ಕೂಡಲೇ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ವಕೀಲ ಹನುಮಂತಪ್ಪ ಮಾತನಾಡಿ, “ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ಮನುವಾದಿಗಳು ಕೋಲಾರ ಜಿಲ್ಲೆಯ ದಲಿತ ಸಮುದಾಯದ ಹನುಮಂತಪ್ಪ ಅವರ ಗುಡಿಸಲಿಗೆ ಬೆಂಕಿ ಹಚ್ಚಿರುವುದು ದೌರ್ಜನ್ಯದ ಪರಮಾವಧಿ. ಪೋಲಿಸರು ಸಮಯಕ್ಕೆ ಸರಿಯಾಗಿ ಘಟನಾ ಸ್ಥಳಕ್ಕೆ ಆಗಮಿಸದಿದ್ದರೆ ಕಂಬಾಲಪಲ್ಲಿ ಪ್ರಕರಣ ಮರುಕಳಿಸುತ್ತಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹುಚ್ಚು ನಾಯಿಗಳ ಹಾವಳಿಗೆ ಬೇಸತ್ತ ಜನ; ಕ್ರಮ ಕೈಗೊಳ್ಳದ ನಗರಸಭೆಯ ವಿರುದ್ಧ ಆಕ್ರೋಶ
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಬೇಂದ್ರಪ್ರ, ಮುಖಂಡರುಗಳಾದ ವಕೀಲ ಆರ್ ಓಬಳೇಶ್, ಮಾದಿಹಳ್ಳಿ ಮಂಜುನಾಥ್, ಶಿವಣ್ಣ, ರವಿ, ಮೆದಗಿನಕೆರೆ ಹನುಮಂತಪ್ಪ, ಮುನಿಸ್ವಾಮಿ, ಪಲ್ಲಾಗಟ್ಟಿ ರಂಗಪ್ಪ ಸೇರಿದಂತೆ ಇತರರು ಇದ್ದರು.