ತಮಿಳುನಾಡಿನ ಚೆನ್ನೈ ಒಳಗೊಂಡು ಉತ್ತರ ಭಾಗದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ.
ಚೆನ್ನೈ ಹಾಗೂ ಸುತ್ತಮುತ್ತಲ ಜಿಲ್ಲೆಗಳಾದ ಚಂಗಲ್‌ಪಟ್ಟು, ಕಾಂಚೀಪುರಂ, ವೇಲುಪುರಂ ಕಲ್ಲಕುರುಚಿ, ಕುಡ್ಡಲೋರು, ನಾಗಪಟ್ಟನಂ ಹಾಗೂ ತಿರುವರೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಸೋಮವಾರವು ಮಳೆಯ ಮುನ್ಸೂಚನೆ ಅರಿತ ಈ ಜಿಲ್ಲೆಯ ಶಾಲಾಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಈ ಭಾಗಗಳಲ್ಲಿ ಜನವರಿ 7ರ ಮುಂಜಾನೆ 8.30 ರಿಂದ ಜನವರಿ 8ರ 5.30ರ ತನಕ ಈ ಭಾಗಗಳಲ್ಲಿ 167ಮಿಮಿ ಮಳೆಯಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಪುದುಚೆರಿ ಭಾಗದ ಕರೈಕ್ಕಾಲ್ ಭಾಗದಲ್ಲಿ 122 ಮಿಮಿ ಮಳೆಯಾಗಿದೆ.
ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಭಾರಿ ಮಳೆಯ ಹಿನ್ನೆಲೆಯಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯವು ಇಂದು (ಜನವರಿ 8) ರಜೆ ಘೋಷಿಸಿದ್ದು, ಸುತ್ತೋಲೆಯ ಪ್ರಕಾರ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮುಂದಿನ ಏಳು ದಿನಗಳಲ್ಲಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಮಾಮಾನ ಇಲಾಖೆಯು ಭಾನುವಾರ(ಜನವರಿ 7) ರಾಜ್ಯದ 10 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವುದಾಗಿ ಮುನ್ಸೂಚನೆ ನೀಡಿತ್ತು.