ಕಾರವಾರ ತಾಲೂಕಿನ ಗ್ರಾಮಗಳಲ್ಲಿ ಸ್ಮಶಾನ ಜಾಗಕ್ಕೆ ಹತ್ತಾರು ವಿಘ್ನಗಳು ಎದುರಾಗುತ್ತಿವೆ. ಒಂದೆಡೆ ಜಾಗದ ವಿವಾದ ಇದ್ದರೆ, ಇನ್ನೊಂದೆಡೆ ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ 1,288 ಗ್ರಾಮಗಳ ಪೈಕಿ ಕೇವಲ ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇತ್ತು. ಇತ್ತೀಚೆಗೆ ಎಲ್ಲ ಗ್ರಾಮಗಳಿಗೂ ಸರಾಸರಿ 10 ಗುಂಟೆಯಷ್ಟು ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿ ಆದೇಶಿಸಲಾಗಿದೆ. ಇದು ಸದ್ಯ ಆದೇಶಕ್ಕೆ ಸೀಮಿತವಾಗಿ ಉಳಿದಿದೆ. ಜಾಗ ಗುರುತಿಸಿದ್ದರೂ ಗಡಿ ಗುರುತು ಹಾಕಿಲ್ಲ ಎನ್ನುವ ದೂರುಗಳು ಗ್ರಾಮಸ್ಥರಿಂದ ಕೇಳಿಬಂದಿವೆ. ರುದ್ರಭೂಮಿಗೆ ಬೇಕಿರುವ ರಸ್ತೆ, ನೀರು ಸೌಲಭ್ಯ ಇನ್ನೂ ಸಿಕ್ಕಿಲ್ಲ. ಶವಸಂಸ್ಕಾರಕ್ಕೆ ಚಾವಣಿ ಸಹಿತ ದಹನ ಕಟ್ಟೆ ನಿರ್ಮಿಸುವ ಕೆಲಸ ಆಗಬೇಕಿದೆ ಎನ್ನುವುದು ಜನರ ಆಗ್ರಹ.
ಕಾರವಾರ ತಾಲೂಕಿನ ಸಿದ್ಧರದಲ್ಲಿ ಸ್ಮಶಾನ ಭೂಮಿಗೆ ಸಾಗಲು ರಸ್ತೆ ಸಮಸ್ಯೆ ಇದೆ. ಮುಡಗೇರಿಯಲ್ಲಿ ಶೆಡ್ ಹಾಳಾಗಿ ವರ್ಷಗಳೆ ಕಳೆದಿದೆ. ವೈಲವಾಡಾ, ಮಾಜಾಳಿ ಸೇರಿ ಕೆಲವೆಡೆ ಸ್ಮಶಾನಕ್ಕೆ ಮೀಸಲಿಟ್ಟ ಜಾಗ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ.
ಶಿರಸಿ ತಾಲೂಕಿನ ಇಟಗುಳಿ, ಹುತ್ಗಾರ, ವಾನಳ್ಳಿ, ಮಂಜುಗುಣಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಸೂಕ್ತ ಸ್ಮಶಾನ ವ್ಯವಸ್ಥೆಯಿಲ್ಲ. ಇದರಿಂದ ಶವ ಸಂಸ್ಕಾರಕ್ಕೆ ಪರದಾಡುವ ಸನ್ನಿವೇಶ ಇದೆ. ಶಿರಸಿಯ ನೆಹರೂ ನಗರದಲ್ಲಿರುವ ಸ್ಮಶಾನ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಸಭೆ ಇದರ ನಿರ್ವಹಣೆಯನ್ನೇ ಮರೆತಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಪುರಾಣ ಪ್ರಸಿದ್ಧ ಗೋಕರ್ಣ ಧಾರ್ಮಿಕ ಕ್ಷೇತ್ರದಲ್ಲಿ ಶವಸಂಸ್ಕಾರ ಮಾಡುವ ಸ್ಥಳ ಸ್ಮಶಾನಕ್ಕೆ ಪವಿತ್ರವಾದ ಸ್ಥಾನವಿದೆ. ಇಲ್ಲಿಯ ವಿಶೇಷವೆಂದರೆ ಜಾತಿ, ಭೇದವಿಲ್ಲದೇ ಎಲ್ಲರೂ ಈ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಬಹುದಾಗಿದೆ. ಕಡಿಮೆ ಕಟ್ಟಿಗೆಯಲ್ಲಿ ಶವ ಸುಡಬಹುದು ಎಂಬ ಮಾತೂ ಇದೆ. ಪವಿತ್ರ ಸ್ಥಳವಾದ್ದರಿಂದ ನಾಡಿನ ವಿವಿಧ ಸ್ಥಳದಿಂದ ಶವ ಇಲ್ಲಿಗೆ ತಂದು ಸುಡುವುದು ರೂಢಿಯಲ್ಲಿದೆ.
ಆದರೆ, ರುದ್ರಭೂಮಿಯಲ್ಲಿ ಸ್ವಚ್ಛತೆಯೂ ಇಲ್ಲ. ಶವ ಸಂಸ್ಕಾರಕ್ಕೆ ಯಾವುದೇ ಸೌಲಭ್ಯವೂ ಇಲ್ಲ. ಎಲ್ಲದನ್ನೂ ಹೊರಗಿನಿಂದಲೇ ಜನರೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕೆಲವೊಮ್ಮೆ ಕತ್ತಲೆಯಲ್ಲಿಯೇ ಶವಸಂಸ್ಕಾರ ಮಾಡುವ ಪರಿಸ್ಥಿತಿಯೂ ಬರುತ್ತಿದೆ. ಸ್ಮಶಾನ ನಿರ್ವಹಣೆಗೆ ಸಿಬ್ಬಂದಿ ನೇಮಿಸುವ ಕೆಲಸವನ್ನೂ ಗ್ರಾಮ ಪಂಚಾಯ್ತಿ ಮಾಡುತ್ತಿಲ್ಲ ಎಂಬ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಭಟ್ಕಳ ತಾಲೂಕಿನ ಬಹುತೇಕ ಸಶ್ಮಾನದಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಅಂತ್ಯಕ್ರಿಯೆ ವೇಳೆ ಸುರಿಯುವ ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕನಿಷ್ಠ ಮೇಲ್ಚಾವಣಿ ಕೂಡ ಇಲ್ಲ. ಮಣ್ಕುಳಿ ಸಶ್ಮಾನದಲ್ಲಿ ಗಿಡಗಂಟಿಗಳು ರಾಶಿ ತುಂಬಿಕೊಂಡಿದೆ. ಬಂದರು ರಸ್ತೆಯಲ್ಲಿರುವ ರುದ್ರಭೂಮಿಯನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸಿದ ಕಾರಣ ಸ್ಥಳೀಯರೆ ಅದನ್ನು ತಮ್ಮ ಸ್ವಂತ ವೆಚ್ಚದಲ್ಲಿ ಅಭಿವೃದ್ದಿಪಡಿಸಿಕೊಂಡಿದ್ದಾರೆ.
ಮಾವಳ್ಳಿ, ಯಲ್ವಡಿಕವೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರುದ್ರಭೂಮಿ ಜಾಗವು ತಕರಾರಿನಲ್ಲಿದೆ. ಯಲ್ಲಾಪುರ ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿ ಕೊರತೆಗಳಿದ್ದು, ಬೆಳಕಿನ ವ್ಯವಸ್ಥೆ ಇಲ್ಲ. ಸೋಲಾರ್ ಬ್ಯಾಟರಿಗಳನ್ನು ಅಳವಡಿಸಲಾಗಿತ್ತಾದರೂ ಅದನ್ನು ಕಳವು ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಗ್ರಾಮ ಪಂಚಾಯ್ತಿ ಸ್ಥಳ ಗುರುತಿಸಿದ್ದರೂ ಶೆಡ್ ಇಲ್ಲ. ಹಾಗಾಗಿ ಜನರು ಅಕ್ಕಪಕ್ಕದ ಅರಣ್ಯದಲ್ಲಿಯೇ ಶವಗಳನ್ನು ಸುಡುವುದು ಸಾಮಾನ್ಯವಾಗಿದೆ.
ಆನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ನಿರ್ದಿಷ್ಟ ಸ್ಥಳ ಗುರುತಿಸದ ಕಾರಣ ಜನ ಅರಣ್ಯದಲ್ಲಿ ಬೇಕಾಬಿಟ್ಟಿ ಸ್ಮಶಾನ ಮಾಡಿಕೊಂಡಿದ್ದಾರೆ. ಮುಂಡಗೋಡ ತಾಲೂಕಿನ ಸ್ಮಶಾನಗಳಿಗೆ ಮೀಸಲಿಟ್ಟ ಜಾಗದಲ್ಲಿ ಕೆಲವು ಅರಣ್ಯ ಪ್ರದೇಶಗಳಲ್ಲಿ ಇದ್ದರೆ, ಇನ್ನೂ ಕೆಲವು ಗ್ರಾಮಠಾಣಾ ಜಾಗಗಳಾಗಿವೆ. ಪಟ್ಟಣ ವ್ಯಾಪ್ತಿಯ ಬಂಕಾಪುರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಬಾಚಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿದ ಜಾಗ ಅತಿಕ್ರಮಣ ಆಗಿದೆ. ಅರಣ್ಯ ಪ್ರದೇಶದಲ್ಲಿಯೇ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿಯಿದೆ. ಕೆಲವೊಮ್ಮೆ ಅರಣ್ಯ ಇಲಾಖೆಯವರು ತಕರಾರು ತೆಗೆಯುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದು ಉತ್ತರ ಕನ್ನಡದ ಬಹುತೇಕ ಪಟ್ಟಣ, ಹಳ್ಳಿಗಳ ಕತೆಯಾಗಿದ್ದು ಈ ಎಲ್ಲ ಸಮಸ್ಯೆಗಳಿಂದ ನಮಗೆ ಮುಕ್ತಿ ನೀಡಿ. ಶವ ಸಂಸ್ಕಾರವನ್ನು ಸರಾಗವಾಗಿ ಮಾಡಲು ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.