ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಡಣಪುರ್, ಗರಗ, ನಾಯಕನಕೆರೆ ಸೇರಿದಂತೆ ಇತರ ಗ್ರಾಮದ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಹಕ್ಕುಪತ್ರ ನೀಡಬೇಕು ಎಂದು ರಾಜ್ಯ ರೈತ ಸಂಘ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
“ರೈತರು ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಈವರೆಗೆ ರೈತರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸಾಗುವಳಿ ಮಾಡುತ್ತಿರುವ ಜಮೀನನ್ನು ಸರ್ಕಾರ ಕೆಐಎಡಿಬಿ ಮುಖಾಂತರ ಕಾರ್ಖಾನೆಗೆ ಹಸ್ತಾಂತರಿಸಿದ್ದು, ಇದನ್ನು ಹಿಂಪಡೆಯಬೇಕು. ಸದರಿ ಜಮೀನನ್ನು ತುಂಗಭದ್ರಾ ಅಣೆಕಟ್ಟು ಕಟ್ಟುವಾಗ ಮುಳುಗಡೆ ಹೊಂದಿ ಪುನರ್ವಸತಿ ಪಡದಂತ ಜನರಿಗೆ ಸರ್ಕಾರ ವಿತರಣೆ ಮಾಡಿತ್ತು” ಎಂದರು.
“ಸದರಿ ರೈತರೇ ಜಮೀನನ್ನು ಸಾಗುವಳಿ ಮಾಡುತ್ತಾ ಬಂದಿದ್ದು, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತ್ಗೆ ಸೇರಿರುವುದಾಗಿ ತಹಶೀಲ್ದಾರ್ ಇಬ್ಬರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ತಂದೆ ತಾಯಿಯಂದಿರು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು: ಎಸ್ಪಿ
“ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಆಗಿ ಏಳು ವರ್ಷವಾಗಿದೆ. ಅದಕ್ಕೂ ಮುನ್ನ ರೈತರು ಸಾಗುವಳಿ ಮಾಡುತ್ತ ಜೀವನ ಕಟ್ಟಿಕೊಂಡಿದ್ದಾರೆ. ಈ ಭಾಗದ ರೈತರು ಜಮೀನಿನಲ್ಲಿ ಸಾಗುವಳಿ ಮಾಡಿ ಅದನ್ನೇ ನಂಬಿ ಬದುಕುತ್ತಿದ್ದಾರೆ. ಹಾಗಾಗಿ ಕೂಡಲೇ ಹಕ್ಕುಪತ್ರ ಒದಗಿಸಬೇಕು. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರಾಜ್ಯ ರೈತ ಸಂಘದ ರಾಜ್ಯ ಮುಖಂಡ ವೀರ್ ಸಂಗಯ್ಯ, ಜಿಲ್ಲಾ ಮುಖಂಡ ಗೋಣಿಬಸಪ್ಪ, ಕರ್ನಾಟಕ ಜನಶಕ್ತಿ ಸರ್ದಾರ್, ವೇಣುಗೋಪಾಲ್, ಪರಶುರಾಮ್ ಸೇರಿದಂತೆ ಇತರರು ಇದ್ದರು.