ಇಡೀ ರಾಜ್ಯ ಬರಗಾಲಕ್ಕೆ ತುತ್ತಾದ ಸಂದರ್ಭದಲ್ಲಿ ಬರಪೀಡಿತ ಪ್ರದೇಶ ಘೋಷಿಸಿದ ಸರ್ಕಾರ ಈವರೆಗೂ ರೈತರ ಪರ ನಿಂತಿಲ್ಲ. ಯಾವುದೇ ಕೃಷಿ ಪೂರಕ ಯೋಜನೆ ರೂಪಿಸಿಲ್ಲ ಎಂದು ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಬೇಸತ್ತು ಊರು ಬಿಟ್ಟು ಗುಳೆ ಹೋಗುವ ಕೃಷಿಕ ವರ್ಗಕ್ಕೆ ಒಂದು ಎಕರೆ ಬೇಸಾಯಕ್ಕೆ ₹10,000 ವೆಚ್ಚ ತಗುಲುತ್ತದೆ. ಆದರೆ ಸರ್ಕಾರ ಪರಿಹಾರದ ಹೆಸರಿನಲ್ಲಿ ₹2,000 ಭಿಕ್ಷೆ ನೀಡುವುದು ಖಂಡನೀಯ” ಎಂದು ಕಿಡಿಕಾರಿದರು.
“ಸರ್ಕಾರ ಈವರೆಗೆ ರೈತರಿಗೆ ಬೆಳೆವಿಮೆ, ಪರಿಹಾರ ಕೊಟ್ಟಿಲ್ಲ. ಯಾವುದೇ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತಿಲ್ಲ. ಒಟ್ಟಾರೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ” ಎಂದು ಆರೋಪಿಸಿದರು.
“ಹಳ್ಳಿಗಳಲ್ಲಿ ರೈತರು ಉಪಯೋಗಕ್ಕೆ ಜಾರಿಗೆ ಬಂದ ಮನರೇಗಾ ಯೋಜನೆ ಕೂಡಾ ಕೈ ಕೊಟ್ಟಿದೆ. ಬಾಕಿ ಉಳಿದ ಹಣ, ಕೂಲಿ, ಕೃಷಿ ಕಾರ್ಮಿಕರಿಗೆ ತಲುಪಿಲ್ಲ. ಹತ್ತು ಹಲವು ಸಮಸ್ಯೆ ಕುರಿತು ಮಹಾಧರಣಿ ನಡೆಸಿದ್ದ ರೈತರಿಗೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. 13 ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಇದ್ದರೂ ಕೊಬ್ಬರಿ ಧಾರಣೆ ಸಂಪೂರ್ಣ ಕುಸಿದಿದೆ. ಕಳೆದ ವರ್ಷದಿಂದ ₹8,000ದಿಂದ ₹9,000ದಲ್ಲಿ ಮಾರಾಟವಾದ ಕೊಬ್ಬರಿಗೆ ಈಗ ₹12,000 ಬೆಲೆ ನಿಗದಿ ಮಾಡುವುದು ವೈಜ್ಞಾನಿಕ ಅಲ್ಲ. ತೋಟಗಾರಿಕೆ ಇಲಾಖೆಯ ವರದಿಯಂತೆ ಕ್ವಿಂಟಾಲ್ ಕೊಬ್ಬರಿಗೆ ₹16,000ಕ್ಕೂ ಅಧಿಕ ವೆಚ್ಚ ತಗುಲುತ್ತದೆ. ಆದರೆ ಸರ್ಕಾರವೇ ವೈಜ್ಞಾನಿಕ ನಿರ್ಧಾರ ಮಾಡಿಲ್ಲ. ಸರ್ವೇ ಮಾಡಿ ₹25,000ಕ್ಕೆ ಬೆಲೆ ನಿಗದಿ ಮಾಡಬೇಕು. ಜತೆಗೆ ನಿರಂತರ ಕೊಬ್ಬರಿ ಖರೀದಿಗೆ ನೆಫೆಡ್ ಕೇಂದ್ರ ತೆರೆಯಬೇಕು” ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಎನ್ ವೆಂಕಟೇಗೌಡ ಮಾತನಾಡಿ, “ರೈತ ಪರ ನಿಲ್ಲಬೇಕಾದ ಸರ್ಕಾರ ಬಗರ್ ಹುಕುಂ ಸಮಿತಿ ರಚನೆ ಮಾಡುವಲ್ಲಿ ವಿಳಂಬ ಅನುಸರಿಸಿದೆ. ಕೂಡಲೇ ಸಮಿತಿ ಅಸ್ತಿತ್ವಕ್ಕೆ ತಂದು ಅರ್ಹರಿಗೆ ಉಳುಮೆ ಚೀಟಿ ನೀಡಬೇಕು. ಆದರೆ ನಮ್ಮ ತಾಲೂಕಿನಲ್ಲಿ ಭೂ ಕಬಳಿಕೆ ಹಗರಣ ಈಗಾಗಲೇ ರಾಜ್ಯಾದ್ಯಂತ ಸುದ್ದಿಯಾಗಿದೆ. ಆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಹಶೀಲ್ದಾರ್ ತಿಳಿಸಬೇಕು. ಆದರೆ ರೈತರ ಕೆಲಸ ಮಾಡದ ಗುಬ್ಬಿ ತಹಶೀಲ್ದಾರ್ ಕೆಲವೇ ಮಂದಿಗೆ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ₹13 ಕೋಟಿ ವೆಚ್ಚದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ನವೀಕರಣ
“ಅಧಿಕಾರಿಗಳು ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸ ಮಾಡಬೇಕು. ಲೋಕೋಪಯೋಗಿ ಇಲಾಖೆಯೂ ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ನಡೆಸುತ್ತಿದೆ. ಗೋಪಾಲಪುರ ಉಂಗ್ರ ರಸ್ತೆ, ಕೆ ಜಿ ಟೆಂಪಲ್ ನಾಗವಲ್ಲಿ ರಸ್ತೆ ಎರಡೂ ಸಂಚಾರಕ್ಕೆ ಯೋಗ್ಯವಿಲ್ಲ” ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಿ ಟಿ ಕುಮಾರ್, ಶಿವಕುಮಾರ್, ಸಿ ಜಿ ಲೋಕೇಶ್, ಗುರು ಚನ್ನಬಸಪ್ಪ, ಯತೀಶ್, ಸತ್ತಿಗಪ್ಪ, ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.