ಜನವರಿ 10ರ ವರೆಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷ ಆರಂಭದಲ್ಲಿಯೇ ಮಳೆ ಆರಂಭವಾಗಿ ಶುಭ ಸೂಚನೆ ನೀಡಿತ್ತು. ಆದರೆ, ಬೆಳೆ ಕಟಾವಿಗೆ ಬಂದಾಗ ಸುರಿದ ಅಕಾಲಿಕ ಮಳೆಯಿಂದ ಕೆಲವೆಡೆ ಸಮಸ್ಯೆಯೂ ಉಂಟಾಗಿತ್ತು. ಇನ್ನು ಕಳೆದ ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ಹಲವೆಡೆಗಳಲ್ಲಿ ಮಳೆ ಸುರಿಯುತ್ತಿದೆ. ಇನ್ನು ಎರಡು ದಿನ ಅಂದರೆ ಜ.10ವರೆಗೂ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಗಳು ಕರ್ನಾಟಕದಲ್ಲಿ ಅಕಾಲಿಕ ಮಳೆ ಸುರಿಯುವಿಕೆಗೆ ಕಾರಣವಾಗಿದೆ. ಚಳಿಯ ಜೊತೆ ಮಳೆಯು ಸೇರಿ ವಾತಾವರಣವು ಭಿನ್ನವಾಗಿದ್ದು, ಇದು ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಪ್ರಮುಖವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕೊಡುಗು ಸೇರಿದಂತೆ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳು ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಲಿದೆ ಎನ್ನಲಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಕಾರವಾರದಲ್ಲಿ ದಾಖಲಾಗಿದೆ. ಪೆಣಂಬೂರು 33, ಹೊನ್ನಾವರದಲ್ಲಿ 32 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದಲ್ಲಿ 30 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ವಿಜಯಪುರದಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಶೃಂಗೇರಿ ತಾಲೂಕಿನ ಬಹುತೇಕ ಭಾಗದಲ್ಲಿ ಭಾನುವಾರ ಮಧ್ಯಾಹ್ನದ ನಂತರ ಅಕಾಲಿಕ ಮಳೆಯಾಗಿದ್ದು, ರಭಸವಾಗಿ ಸುರಿಯಿತು. ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಿಗೆ ಭಾಗದಲ್ಲಿಎರಡು ಗಂಟೆಗೂ ಹೆಚ್ಚು ಮಳೆಯಾಗಿದೆ.
ದಕ್ಷಣ ಕನ್ನಡದ ಬಂಟ್ವಾಳದಲ್ಲಿ ಭಾನುವಾರ ರಾತ್ರಿ ಸುರಿದ ಉತ್ತಮ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯು ಕೆರೆಯಂತೆ ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಪ್ರಗತಿಯಲ್ಲಿದ್ದು ರಸ್ತೆಯನ್ನು ಅಗೆದು ಹಾಕಲಾಗಿದೆ. ಕೆಲವೆಡೆ ಮಣ್ಣು ತುಂಬಿಸಿ ರಸ್ತೆಯನ್ನು ಎತ್ತರ ಮಾಡಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಟ ನಡೆಸಿದರು.