ಬಾಬಾ ಬುಡನ್‌ಗಿರಿಯಲ್ಲಿ ಗೋರಿ ಧ್ವಂಸಗೊಳಿಸಿದ ಪ್ರಕರಣ ಸಂಬಂಧ ಹಿಂದುತ್ವ ಕೋಮುವಾದಿ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಒಳಪಡಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 7ನೇ ತಾರೀಖಿಗೆ ಮುಂದೂಡಿದೆ.
2017ರ ಡಿಸೆಂಬರ್ 3ರಂದು ಬಾಬಾ ಬುಡನ್‌ಗಿರಿಯಲ್ಲಿ ದತ್ತ ಜಯಂತಿ ಆಚರಿಸಿದ್ದ ಹಿಂದುತ್ವವಾದಿಗಳು ಅಲ್ಲಿದ್ದ ಗೋರಿಗಳನ್ನು ಧ್ವಂಸಗೊಳಿಸಿದ್ದರು. 14 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು 2023ರ ಅಕ್ಟೋಬರ್ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸುತ್ತಿರುವ ಚಿಕ್ಕಮಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಹಿಂದುತ್ವವಾದಿಗಳಿಗೆ ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
14 ಮಂದಿ ಆರೋಪಿಗಳ ಪೈಕಿ 12 ಮಂದಿ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದೆ.
ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ವಕೀಲ ಸುಧಾಕರ್, “ಚಾರ್ಜ್‌ಶೀಟ್‌ನಲ್ಲಿ ಸಾಕಷ್ಟು ಲೋಪಗಳಿವೆ. ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅಲ್ಲಿ ಆಗಿರುವ ಘಟನೆಗೂ ದಾಖಲಾಗಿರುವ ಪ್ರಕರಣಕ್ಕೂ ಸಂಬಂಧವೇ ಇಲ್ಲ” ಎಂದು ಹೇಳಿದ್ದಾರೆ.