ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೃತಪಟ್ಟಿರುವ ಘಟನೆ ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ (ಜ.9) ಬೆಳಗಿನ ಜಾವ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಚನ್ನವೀರಗೌಡ (32), ಗದಗ ನಗರದ ಯುವರಾಜ ಕಾಶಪ್ಪ ಹೂಗಾರ (22) ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿಸಲಾಗಿತ್ತಾದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ ಚಿದಂಬರ್ ಕುಲಕರ್ಣಿ, ವೀರಣ್ಣ ಸಂಗಳದ್, ಮಂಜುನಾಥ ತಳವಾರ್ ತೀವ್ರ ಗಾಯಗೊಂಡಿದ್ದು ಎಲ್ಲರೂ ಗದಗ ಮೂಲದವರು.
ಗದಗದಿಂದ ಶಬರಿಮಲೆಗೆ ಹೊಸಪೇಟೆ ಮಾರ್ಗವಾಗಿ ಐವರು ಕಾರಿನಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿರುವ ಸಿಮೆಂಟ್ ಕಟ್ಟೆಗೆ ಕಾರು ಡಿಕ್ಕಿಯಾದ ಪರಿಣಾಮ ಕಾರು ಪಲ್ಟಿಯಾಗಿ ಅವಘಡ ಸಂಭವಿಸಿದೆ.
ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಶ್ರೀಹರಿಬಾಬು ಬಿ.ಎಲ್, ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶಪ್ಪ ಮಾಲ್ಲಪುರೆ, ಕೊಟ್ಟೂರು ಸಿಪಿಐ ವೆಂಕಟೇಶಸ್ವಾಮಿ, ಪಿಎಸ್‌ಐ ಎರಿಯಪ್ಪ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.