“ವಿದ್ಯಾರ್ಥಿಗಳು ಕಸ ಗುಡಿಸುವುದರಲ್ಲಿ, ಅಗತ್ಯ ಸಾಧನಗಳನ್ನು ಬಳಸಿಕೊಂಡು ಶೌಚಾಲಯ ಸ್ವಚ್ಛಗೊಳಿಸಿರುವುದರಲ್ಲಿ ತಪ್ಪಿಲ್ಲ” ಎಂದು ಕೆಲದಿನಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, “ಸ್ವಚ್ಛತೆ ಬಗ್ಗೆ ಅರಿವು ಮೂಡಲು ಕೈಗೆ ಗ್ಲೌಸ್ ಹಾಕಿ ಶೌಚಾಲಯ ಶುಚಿ ಮಾಡಿಸಬೇಕು. ಆದರೆ ಒತ್ತಾಯಪೂರ್ವಕವಾಗಿ ಮಾಡಿಸಬಾರದು” ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಮಾತನಾಡಿದ ಅವರು, “ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಾಗಿದ್ದಾಗ ನಾವೇ ಕ್ಲೀನ್ ಮಾಡುತ್ತಿದ್ದೆವು. ಅದು ನಮಗೆ ಶಿಕ್ಷಣದ ಒಂದು ಭಾಗವಾಗಿತ್ತು” ಎಂದು ತಿಳಿಸಿದ್ದಾರೆ.
“ಮಕ್ಕಳು ಸ್ವಾವಲಂಬಿಗಳಾಗಬೇಕು ಎಂದು ನಮ್ಮ ಮನೆಯಲ್ಲೂ ಕೂಡ ಮಕ್ಕಳಿಗೆ ನಾವು ಶೌಚಾಲಯ ಸ್ವಚ್ಛಗೊಳಿಸುವುದನ್ನು ಕಲಿಸುತ್ತೇವೆ. ಸ್ವಚ್ಛತೆ ಬಗ್ಗೆ ಅರಿವು ಮೂಡಲು ಕೈಗೆ ಗ್ಲೌಸ್ ಹಾಕಿ ಶೌಚಾಲಯ ಕ್ಲೀನ್ ಮಾಡಿಸಬೇಕು. ಆದರೆ ಒತ್ತಾಯಪೂರ್ವಕವಾಗಿ ಸ್ವಚ್ಛಗೊಳಿಸಬಾರದು. ಇಂಥ ಕೆಲಸಗಳನ್ನು ಚಿಕ್ಕಂದಿನಲ್ಲೇ ತಿಳಿದುಕೊಳ್ಳುವುದು ಉತ್ತಮ” ಎಂದು ಯು ಟಿ ಖಾದರ್ ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯಗಳನ್ನು ತೊಳೆದರೆ ತಪ್ಪಿಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ವಿಧಾನಸಭೆ ಸ್ಪೀಕರ್ ಯುಟಿ ಖಾದರ್
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗಟ್ಟು ಮಾಡುವ ಸಮಾರಂಭ ಆಗಬೇಕು ಅಂತಾ ನಾನು ಬಯಸುತ್ತೇನೆ ಎಂದು ಯು ಟಿ ಖಾದರ್@utkhader #UTkhader pic.twitter.com/f2T9ozvymx
— eedina.com (@eedinanews) January 9, 2024
ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಕೈಯಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಿದ್ದ ಘಟನೆಯ ಬಳಿಕ ರಾಜ್ಯದ ಕೆಲವು ಶಾಲೆಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದ ಘಟನೆ ಇತ್ತೀಚೆಗೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಚರ್ಚೆಗೊಳಗಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೊಸ ಸುತ್ತೋಲೆಯೊಂದನ್ನು ಹೊರಡಿಸಿ, ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಎಫ್ಐಆರ್ ಹಾಕಿಸುವುದಲ್ಲದೇ, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನೂ ಕೂಡ ನೀಡಲಾಗಿತ್ತು.
ಇದನ್ನು ಓದಿದ್ದೀರಾ? ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ಗಟ್ಟಿಗಿತ್ತಿ: ನ್ಯಾಯಮೂರ್ತಿ ನಾಗರತ್ನ
ಮತ್ತೊಂದೆಡೆ ಶಾಲೆಯಲ್ಲಿ ಸ್ವಚ್ಛ ಮಾಡುವ ಸಿಬ್ಬಂದಿಗಳ ನೇಮಕವೇ ಆಗಿಲ್ಲ ಎನ್ನುವ ಆರೋಪಗಳು ಶಿಕ್ಷಕರಿಂದ ಕೇಳಿ ಬಂದಿವೆ. ಈ ಎಲ್ಲ ಬೆಳವಣಿಗೆಯ ನಡುವೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ವೇಳೆ ಮಾತನಾಡಿದ್ದ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, “ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿರುವ ಕಸ ಗುಡಿಸುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸಬಹುದು. ಅದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದ್ದರು. ಇದು ಹಲವರ ವಿರೋಧಕ್ಕೂ ಕಾರಣವಾಗಿತ್ತು.