ಭಾರತ – ಮಾಲ್ಡೀವ್ಸ್ ನಡುವೆ ಉಂಟಾಗಿರುವ ರಾಜತಾಂತ್ರಿಕ ವಿವಾದದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನೆರೆಹೊರೆಯರೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಕಾಲಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ನಮ್ಮ ನೆರೆಹೊರೆಯವರನ್ನು ನಾವು ಬದಲಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ನ ಮೂವರು ಮಂತ್ರಿಗಳು ಭಾರತ ಹಾಗೂ ಪ್ರಧಾನಿ ಬಗ್ಗೆ ವಿವಾದಾತ್ಮಕ ಬರಹಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ನಂತರ ಇದು ಎರಡು ರಾಷ್ಟ್ರಗಳ ನಡುವೆ ಕಿಡಿ ಹೊತ್ತಿಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ವಿವಾದ ತೀವ್ರ ಸ್ವರೂಪ ಪಡೆದುಕೊಂಡಾಗ ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ ಮೂವರು ಮಂತ್ರಿಗಳನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿ ಸರ್ಕಾರಕ್ಕೂ ಮಂತ್ರಿಗಳ ಹೇಳಿಕೆಯ ಬಗ್ಗೆ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದರಿಂದ ತೃಪ್ತಿಗೊಳಗಾಗದ ಭಾರತ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮೂವರು ಸಚಿವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಲ್ಲದೆ, ಭಾರತದಲ್ಲಿರುವ ಮಾಲ್ಡೀವ್ಸ್ ರಾಯಭಾರಿಯನ್ನು ಕರೆಸಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತ ಸಮನ್ಸ್ ನೀಡಿದ ಕೆಲವೇ ಗಂಟೆಗಳಲ್ಲಿ ಮಾಲ್ಡೀವ್ಸ್ ಕೂಡ ಭಾರತದ ರಾಯಭಾರಿಗೆ ಸಮನ್ಸ್ ನೀಡಿ ಸ್ಪಷ್ಟೀಕರಣ ತೆಗೆದುಕೊಂಡಿತ್ತು. ಇಲ್ಲಿನ ಹಲವು ಪ್ರವಾಸೋದ್ಯಮ ಕಂಪನಿಗಳು ಪ್ರಯಾಣಿಕರ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ್ದವು.
ಭಾರತದೊಂದಿಗೆ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಚೀನಾಕ್ಕೆ ಒಂದು ವಾರದ ಪ್ರವಾಸ ಕೈಗೊಂಡಿದ್ದಾರೆ.