ಕೇಂದ್ರ ಜಪಾನ್‌ನಲ್ಲಿ ಮತ್ತೆ ಪ್ರಬಲವಾಗಿ ಭೂಕಂಪ ಉಂಟಾಗಿದ್ದು, ಆದರೆ ಈ ಬಾರಿ ಸುನಾಮಿ ಉಂಟಾಗುವ ಯಾವುದೇ ಆತಂಕವಿಲ್ಲ ಎಂದು ಸರ್ಕಾರ ತಿಳಿಸಿದೆ.
ಜಪಾನಿನ ಕಡಲ ತೀರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ಭೂಮಿ ಕಂಪಿಸಿದೆ. ಇದೇ ಸ್ಥಳದಲ್ಲಿ ಜನವರಿ 1ರಂದು ಪ್ರಬಲ ಭೂಕಂಪನ ಸಂಭವಿಸಿ ಹಲವು ಸಾವುನೋವುಗಳಿಗೆ ಕಾರಣವಾಗಿತ್ತು. ಕಳೆದ ವಾರ ಸಂಭವಿಸಿದ ಭೂಕಂಪನದಲ್ಲಿ ಸಾವಿನ ಪ್ರಮಾಣ 200ಕ್ಕೆ ಏರಿಕೆಯಾಗಿದ್ದು, 100 ಮಂದಿಯ ಮೃತದೇಹ ಪತ್ತೆಯಾಗಿರಲಿಲ್ಲ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ತಿಳಿಸಿದ್ದರು.
ಹೊಸ ವರ್ಷದ ದಿನದಂದು 7.5ರ ತೀವ್ರತೆಯಲ್ಲಿ ಸಂಭವಿಸಿದ ಕಂಪನದಿಂದ ನೋಟೋ ಪೆನಿನ್ಸುಲಾದಲ್ಲಿ ಹಲವು ಕಟ್ಟಡಗಳು ಉರುಳಿಬಿದ್ದು ಸುಮಾರು ಪ್ರಮಾಣದ ಆಸ್ತಿಪಾಸ್ತಿಗಳು ನಷ್ಟ ಉಂಟಾಗಿದ್ದವು.
ಭೂಕಂಪನದಿಂದಾಗಿ ಇಶಿಕೋವಾ ಪ್ರದೇಶದ ಅವಶೇಷಗಳಡಿ 3,500 ಕ್ಕೂ ಹೆಚ್ಚು ಮಂದಿ ಸಿಲುಕಿದ್ದರು. ಸಾವಿನ ಪ್ರಮಾಣ 200 ದಾಟಿದೆ ಎಂದು ಹೇಳಲಾದರೂ 100ಕ್ಕೂ ಹೆಚ್ಚು ಮೃತದೇಹ ಪತ್ತೆಯಾಗಿಲ್ಲ. ಪರಿಹಾರ ಕಾರ್ಯಾಚರಣೆ ಇನ್ನೂ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ವಾಜಿಮಾ ಪ್ರದೇಶದಲ್ಲಿ 1,200ಕ್ಕೂ ಹೆಚ್ಚು ಕಂಪನಗಳು ಉಂಟಾಗಿತ್ತು. ಇದರಿಂದ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಭಾರಿ ಹಿಮ ಬೀಳುತ್ತಿರುವುದರಿಂದ ಭೂಕಂಪ ಉಂಟಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದು ಕಷ್ಟವಾಗುತ್ತಿದೆ. 30 ಸಾವಿರ ಮಂದಿ ಸರ್ಕಾರಿ ಆಶ್ರಯ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೆ ಈ ಪ್ರದೇಶದ 60 ಸಾವಿರ ಮಂದಿಗೆ ನೀರಿನ ಸಮಸ್ಯೆ ಉಂಟಾಗಿದ್ದರೆ, 15 ಸಾವಿರ ಮಂದಿ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.
ವಿಪತ್ತು ಪರಿಹಾರ ಸಭೆಯಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಫುಮಿಯೊ ಕಿಶಿ, ಭೂಕಂಪನ ಪ್ರದೇಶದಲ್ಲಿ ಎಲ್ಲ ರೀತಿಯ ಪರಿಹಾರ ಕಾರ್ಯಾಚರಣೆ ಕೈಗೊಂಡು ಸಮಸ್ಯೆಯನ್ನು ಪರಿಹರಿಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ತೊಂದರೆಗೊಳಗಾಗಿರುವ ಸಂತ್ರಸ್ತರನ್ನು ಭೂಕಂಪ ಪೀಡಿತ ಪ್ರದೇಶದಿಂದ ದೂರದ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.