ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗರು ನಿದ್ದೆಯಿಂದ ಮೇಲೆದಿದ್ದಾರೆ. ರಾಮ, ಕೃಷ್ಣ ಜಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ರಾಮ ಕೃಷ್ಣರ ಜಪ ನಡೆಯಲ್ಲ. ಈಗ ಏನಿದ್ದರೂ ಅಭಿವೃದ್ಧಿಯ ಜಪ ಮಾತ್ರವೇ ಗೆಲ್ಲಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. “ಬಿಜೆಪಿಗರು ರಾಮ, ಕೃಷ್ಣನನ್ನು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ರಾಮ, ಕೃಷ್ಣರ ಹೆಸರಿನಲ್ಲಿ ಮತದಾರರನ್ನು ವಂಚಿಸಲು ಹೊರಟಿದ್ದಾರೆ” ಎಂದು ಆರೋಪಿಸಿದರು.
“ಸ್ವಾಮಿ ವಿವೇಕಾನಂದರ ಜನ್ಮದಿನದಂದು ಯುವನಿಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಯೋಜನೆ ಮೂಲಕ ಪದವೀಧರ ಯುವಜನರಿಗೆ ಆರ್ಥಿಕ ಶಕ್ತಿ ನೀಡಲಾಗುತ್ತದೆ” ಎಂದರು.
“ಬದುಕಿರುವವರೆಗೂ ಸೊರಬ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತೇನೆ. ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ. ಎಲ್ಲ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತೇನೆ. ಸಮಸ್ಯೆಗಳನ್ನು ಅರಿತು, ಪರಿಹರಿಸಲು ಶ್ರಮಿಸುತ್ತೇನೆ” ಎಂದು ಹೇಳಿದ್ದಾರೆ.