ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯು ಸ್ಪಷ್ಟವಾದ ಆರ್‌ಎಸ್‌ಎಸ್/ಬಿಜೆಪಿ ಕಾರ್ಯಕ್ರಮವಾಗಿದ್ದು, ತಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾಮ ಮಂದಿರ ಟ್ರಸ್ಟ್ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿತ್ತು.
“ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರ್‌ಎಸ್‌ಎಸ್/ಬಿಜೆಪಿಯು ಅಯೋಧ್ಯೆಯ ದೇವಾಲಯವನ್ನು ಬಹಳ ಹಿಂದಿನಿಂದಲೂ ರಾಜಕೀಯ ಯೋಜನರಯನ್ನಾಗಿ ಮಾಡಿಕೊಂಡುಬಂದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮಾಡಿಕೊಂಡಿರುವುದರಿಂದ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ಸ್ಪಷ್ಟವಾಗಿ ನಿರ್ಧರಿಸಲಾಗಿದೆ” ಎಂದು ಪಕ್ಷದ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಈ ಮೊದಲು, ಸೋನಿಯಾ ಗಾಂಧಿ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ನಿಯೋಗವು ಭಾಗವಹಿಸುತ್ತದೆ ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನ ಅಂದಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ
ಸಿಪಿಐಎಂ, ಸಿಪಿಐ, ಟಿಎಂಸಿ ಸೇರಿರಂತೆ ಕೆಲವು ವಿಪಕ್ಷಗಳು ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ಈ ವಾರದ ಆರಂಭದಲ್ಲಿ ಬೃಂದಾ ಕಾರಟ್ ಅವರು, ”ಬಿಜೆಪಿ ಧರ್ಮವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತದೆ” ಎಂದು ಟೀಕಿಸಿದ್ದರು.
“ನಾವು ಹೋಗುವುದಿಲ್ಲ, ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ, ಆದರೆ ಅವರು ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದಾರೆ, ಇದು ಸರಿಯಲ್ಲ” ಎಂದು ಬೃಂದಾ ಕಾರಟ್ ಹೇಳಿದ್ದರು.
ಒಂದು ವೇಳೆ ಕಾಂಗ್ರೆಸ್ ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಬಲಪಂಥೀಯ ಆಹ್ವಾನ ಸ್ವೀಕರಿಸಿದಂತಾಗುತ್ತದೆ ಎಂದು ಒಕ್ಕೂಟದ ಕೆಲವು ನಾಯಕರು ಹೇಳಿದ್ದಾರೆ. ಮತ್ತು ಕೆಲವರು ಉದ್ಘಾಟನೆಗೆ ಹೋದರೂ ಹೋಗದಿದ್ದರೂ ಹಿಂದೂ ವಿರೋಧಿ ಆಗುವುದಿಲ್ಲ ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದಿದ್ದರು.