ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ವ್ಯಾಪ್ತಿಯ ರೈತರಿಗೆ ಕೆನಾಲ ನೀರು ಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ಕೋಲ್ಹಾರದಲ್ಲಿ ಪ್ರತಿಭಟನೆ ನಡೆಸಿದೆ. ಒಕ್ಕೂಟದ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಸೋಮು ಭೀ. ಪರಾದಾರ, “ಈ ಭಾಗದ ಎಲ್ಲ ರೈತರು ಮನವಿ ಮೂಲಕ ತಮ್ಮಲ್ಲಿ ವಿನಂತಿಸಿ ಕೊಳ್ಳುವದೇನೆಂದರೆ. ಕೊಲ್ಹಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರ ಜಮೀನುಗಳಲ್ಲಿ ಬರಗಾಲದಿಂದ ಬೆಳೆ ಒಣಗುತ್ತಿದ್ದು, ಆನೇಕ ಬೆಳೆ ಈಗಾಲೇ ಕೈಕೊಟ್ಟಿವೆ. ಇದರಿಂದ ರೈತರು ಕಂಗಾಲಾಗಿದ್ದು, ಇರುವ ಬೆಳೆ ಉಳಿಸಿಕೊಳ್ಳಲು ನೀರು ಬಿಡಬೇಕು. ಇದರಿಂದ ಸುತ್ತು-ಮುತ್ತಲಿನ ರೈತರ ಜಮೀನುಗಳಿಗೆ ಮತ್ತು ದನ-ಕರುಗಳಿಗೆ ಮೇವಿಗೆ ಸಹಾಯವಾಗುತ್ತದೆ” ಎಂದರು.
ತಕ್ಷಣದಿಂದಲೇ ಕಾಲುವೆಗಳಿಗೆ ನೀರು ಹರಿಸಿದರೆ ಮೇವಿಗೆ, ಅಲ್ಪವಧಿ ಬೆಳೆಗಳಿಗೆ, ತರಕಾರಿ, ಕಡಲೆ, ಶೇಂಗಾ, ಗೋಧಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ಬಾವಿ, ಬೋರ್ವೆಲ್‌ಗಳು ಸಹಾ ಒಣಗುತ್ತಿವೆ. ಅಂತರ್ಜಲ ಕಡಿಮೆಯಾಗುತ್ತಿದೆ.
ಈಗಾಗಲೇ ನಾರಾಯಣಪುರ ಜಲಾಶಯದಿಂದ ಎಡಭಾಗ-ಬಲಭಾಗದ ಕಾಲುವೆಗಳಿಗೆ ನೀರು ಹರಿಸುತ್ತಿದ್ದು, ಕಾರಣ ತಾವು ಮುಳವಾಡ ಏತ ನೀರಾವರಿ ಎಡಭಾಗ ಮತ್ತು ಬಲಭಾಗದ ಕಾಲುವೆಗಳಿಗೆ ಕನಿಷ್ಠ ತಿಂಗಳಿಗೆ 10 ದಿನವಾದರೂ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ದಿನಾಂಕ 20.01.2024ರಂದು ಉಗ್ರವಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀಕಾಂತ ಬಿರಾದರ, ಬಸಪ್ಪ ನ್ಯಾಮಗೌಡ, ಶ್ರೀಶೈಲ್ ಬ್ಯಾಡಗಿ, ಬಸಪ್ಪ ವಾಲೆಕಾರ, ಮಲ್ಲಿಕಾರ್ಜುನ ರೆಡ್ಡರ ಇತರರು ಇದ್ದರು.