ಬೀದಿಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಗಳೂರು ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗಾಗಿ ನಗರದ ಹೃದಯ ಭಾಗದಲ್ಲಿ ಬೃಹತ್ ಬೀದಿಬದಿ ವ್ಯಾಪಾರ ವಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬಿ ಬದುಕಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಗರದ ಎಲ್ಲ 60 ವಾರ್ಡ್‌ಗಳಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರತಿ ವಾರ್ಡ್‌ಗಳಲ್ಲಿ ಮಹಾನಗರ ಪಾಲಿಕೆ ವ್ಯಾಪಾರ ವಲಯ ನಿರ್ಮಿಸಿಕೊಡಲಿದೆ. ಬೀದಿಬದಿ ವ್ಯಾಪಾರಿಗಳು ಸಹಕಾರ ಸಂಘ ರಚಿಸಿರುವುದು ಬೀದಿಬದಿ ವ್ಯಾಪಾರಿಗಳನ್ನು ಪ್ರಗತಿಶೀಲರನ್ನಾಗಿ ಮಾಡಲು ಅನುಕೂಲವಾಗಲಿದೆ” ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಬಿ ಕೆ ಇಮ್ತಿಯಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿ, “ಬೀದಿಬದಿ ವ್ಯಾಪಾರಿಗಳ ರಕ್ತ ಹೀರುತ್ತಿರುವ ಬಡ್ಡಿ ದಂಧೆಕೋರರಿಂದ ಮುಕ್ತಿಗೊಳಿಸುವುದಕ್ಕಾಗಿ ಮತ್ತು ಬೀದಿಬದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಪಂಗನಾಮ ಹಾಕುತ್ತಿದ್ದ ಬ್ಲೇಡ್ ಕಂಪೆನಿಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸಿ ಆರ್ಥಿಕ ಸ್ವಾವಲಂಬಿಗಳಾಗಿ ಮಾಡಿ ಅವರನ್ನು ಪ್ರಗತಿಶೀಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಕಾರ ಸಂಘವನ್ನು ರಚಿಸಲಾಗಿದೆ” ಎಂದರು.
ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, “ಸಹಕಾರ ಸಂಘದ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಿಸಿ ಬೀದಿಬದಿ ವ್ಯಾಪಾರಿಗಳ ಸಹಕಾರ ಸಂಘ ಮಾಡಿರುವುದು ಒಂದು ಐತಿಹಾಸಿಕ ಹೆಜ್ಜೆ. ನಗರದ ಅಭಿವೃದ್ಧಿಗೆ ಬೀದಿ ವ್ಯಾಪಾರಿಗಳು ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಭಗವತಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಬಿ ಎಂ ಮಾಧವ, ಪರಿವರ್ತನಾ ಗ್ರಾಮೀಣ ಸೊಸೈಟಿಯ ನಿರ್ದೇಶಕ ಡಿ ಕೃಷ್ಣಾನಂದ, ಚಿಂತಕಿ ಡಾ ರೀಟಾ ನೋರೋನ್ಹ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಾಮರಸ್ಯ ಮಂಗಳೂರಿನ ಅಧ್ಯಕ್ಷೆ ಮಂಜುಳಾ ನಾಯಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಸಂಘದ ಉಪಾಧ್ಯಕ್ಷ ಹರೀಶ್ ಪೂಜಾರಿ ಶುಭ ಹಾರೈಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಿದ್ದರಾಮಯ್ಯ ಐದು ವರ್ಷ ಅಧಿಕಾರ ಪೂರೈಸುತ್ತಾರೆ: ಸಚಿವ ರಾಜಣ್ಣ
ಸಿಐಟಿಯು ಅಧ್ಯಕ್ಷರೂ ನಾಗುರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯುವ ವಕೀಲ ಚರಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಬಾವ ಪದರಂಗಿ, ಗ್ಲೋಬಲ್ ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಮೊಹಮ್ಮದ್ ಫೈರೋಜ್, ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು, ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಉಡುಪಿ, ಮಾಜಿ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಸೇರಿದಂತೆ ಬಹುತೇಕರು ಇದ್ದರು.