“ಜಾಗತಿಕ ಸ್ಪರ್ಧಾತ್ಮಕತೆಯ ಇಂದಿನ ದಿನಗಳಲ್ಲಿ ಯುವ ಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೇಶದ ಸರ್ವಾಂಗೀಣ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು” ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಯುವಜನತೆಗೆ ಕರೆ ನೀಡಿದರು.
ಮಹಾರಾಷ್ಟ್ರದ ಪುಣೆಯ ಎಂ.ಐ.ಟಿ ವರ್ಲ್ಡ್ ಪೀಸ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 13ನೇ ಭಾರತೀಯ ವಿದ್ಯಾರ್ಥಿ ಸಂಸದ್‌ನ ಮೂರು ದಿನಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
“ಇಂದು ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಿದೆ. 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಕಲ್ಪನೆಗೆ ಭದ್ರಬುನಾದಿ ಹಾಕಿದ ಕರ್ನಾಟಕ ವಿಶ್ವಗುರು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು ತತ್ವವನ್ನು ಬೋಧಿಸಿದ್ದಾರೆ. ಎಲ್ಲರಲ್ಲಿಯೂ ಸಮಾನತೆ, ಸಹೋದರತ್ವ ಹಾಗೂ ಜಾತಿ ರಹಿತ ಸಮಾಜವನ್ನು ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳಿದರು” ಎಂದು ತಿಳಿಸಿದರು.
“ಇಂದಿನ ರಾಜಕಾರಣದಲ್ಲಿ ಯುವಕರ ಪಾತ್ರದ ಮಹತ್ವದ್ದಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಯುವಜನತೆ ದಾಪುಗಾಲು ಇಡುತ್ತಿದ್ದು, ರಾಜಕೀಯ ಕ್ಷೇತ್ರದ ಬಗ್ಗೆ ಯುವಜನತೆ ಅತಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದರು.
ಹಿಂದೆಂದಿಗಿಂತಲೂ ಯುವಜನತೆ ಇಂದು ಹೆಚ್ಚಿನ ರೀತಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲತೆಯಿಂದ ತೊಡಗಿಕೊಳ್ಳುವುದು ಅವಶ್ಯಕವಾಗಿದೆ. ಯುವಜನತೆ ದೇಶವನ್ನು ಸದೃಢ, ಸಶಕ್ತ ಹಾಗೂ ಸಮೃದ್ದವಾಗಿಸಲು ತಮ್ಮ ದೂರದೃಷ್ಟಿ ಹಾಗೂ ಜಾಣ್ಮೆಯಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಬೇಕು. ಇದು ಇಂದಿನ ತುರ್ತು ಅವಶ್ಯಕತೆಯಾಗಿದೆ. ರಾಜಕೀಯಕ್ಕೆ ಧುಮುಕಿ ದೇಶವನ್ನು ಅಭಿವೃದ್ದಿಯತ್ತ ಕೊಂಡ್ಯೊಯಲು ಶ್ರಮಿಸುವಂತೆ ಬಸವರಾಜ ಹೊರಟ್ಟಿ ಕರೆ ನೀಡಿದರು.
ಸಮಾರಂಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್, ಲೋಕಸಭಾ ಸದಸ್ಯ ಚಿರಾಗ್ ಪಾಸ್ವಾನ್, ಎಂ.ಐ.ಟಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ವಿಶ್ವನಾಥ ಕರಾಡ್, ರಾಹುಲ್ ಕರಾಡ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಯುವ ಶಾಸಕ ಪುರಸ್ಕಾರಕ್ಕೆ ಭಾಜನರಾದ ಶಾಸಕ ಸತ್ಯಜೀತ್ ಸುಧೀರ್ ತಾಂಬೆ, ಉಚ್ಚ ಶಿಕ್ಷಣ ಪಡೆದ ಪಂಚಾಯ್ತಿ ಅಧ್ಯಕ್ಷರಾದ ಮಹಾರಾಷ್ಟ್ರದ ಯಶೋಧರಾ ರಾಜೆ ಶಿಂಧೆ, ಪಂಜಾಬನ್ ರಾಜ್ ಬಲವಿಂದರ್ ಸಿಂಗ್, ಪ್ರಿಯಾಂಕ ತಿವಾರಿ, ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.