- ರಮೇಶ್ ಜಾರಕಿಹೊಳಿ, ಮುರುಗೇಶ ನಿರಾಣಿ, ಕೆ ಸುಧಾಕರ್ರಿಂದ ನಾಮಪತ್ರ ಸಲ್ಲಿಕೆ
- ಹಲವೆಡೆ ದೇವರ ಮೋರೆ ಹೋಗಿ, ನಂತರ ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳು
ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು (ಏಪ್ರಿಲ್ 13) ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದಲೇ ರಾಜ್ಯದ ಹಲವೆಡೆ ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಕೆಲವರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ, ಬೀಳಗಿ ಕ್ಷೇತ್ರದಲ್ಲಿ ಮುರುಗೇಶ ನಿರಾಣಿ, ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೂಡ ಚಿಕ್ಕಬಳ್ಳಾಪುರದಲ್ಲಿ ಹಾಗೂ ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಸೇರಿದಂತೆ ರಾಜ್ಯದ ನಾನಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ಗೋಕಾಕ್ ಪಟ್ಟಣದ ತಹಸೀಲ್ದಾರ್ ಕಚೇರಿಗೆ ತೆರಳಿದ ರಮೇಶ್ ಜಾರಕಿಹೊಳಿ, ಗೋಕಾಕ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿಯೂ ಸಚಿವ ಮುರುಗೇಶ್ ನಿರಾಣಿ ನಾಮಪತ್ರ ಸಲ್ಲಿಸಿದ್ದು, ಬೀಳಗಿ ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿ ಬೀಳಗಿ ಕ್ಷೇತ್ರದ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಒಲ್ಲದ ಮನಸ್ಸಿನಲ್ಲೇ ವರುಣಾದೆಡೆಗೆ ಸೋಮಣ್ಣ; ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ
ಇದಕ್ಕೂ ಮೊದಲು ನಿರಾಣಿ ಅವರು ಬೀಳಗಿ ಪಟ್ಟಣದ ಪ್ರಸಿದ್ಧ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ನಿರಾಣಿ ಜೊತೆಗೆ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ, ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಸ್ಥಳೀಯ ಮುಖಂಡರಾದ ಈರಣ್ಣ ಗಿಡ್ಡಪ್ಪಗೋಳ, ಮಲ್ಲಿಕಾರ್ಜುನ ಅಂಗಡಿ, ಬಿ ಜಿ ರೇವಡಿಗಾರ, ಶಂಭೋಜಿ ಸೇರಿದಂತೆ ಇತರರು ಇದ್ದರು.
ಇನ್ನು ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಕೂಡ ಬನಹಟ್ಟಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೂಡ ಚಿಕ್ಕಬಳ್ಳಾಪುರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ, ರಾಮನಗರ ಜಿಲ್ಲೆಯ ಮಾಗಡಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಮಾಗಡಿ ಕಲ್ಯಾಗೇಟ್ ಗಣೇಶ ದೇವಸ್ಥಾನದಿಂದ ತಾಲೂಕು ಕಚೇರಿವರೆಗೂ ಬೃಹತ್ ಜಾಥಾ ನಡೆಸಿದ ಬಳಿಕ ಪ್ರಸಾದ್ ಗೌಡ ಉಮೇದುವಾರಿಕೆ ಸಲ್ಲಿಸಿದ್ದು, ಈ ವೇಳೆ ಸಚಿವ ಸಿ ಎನ್ ಅಶ್ವತ್ಥ ನಾರಾಯಣ ಕೂಡ ಇದ್ದರು.
ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸೌತ್ ಎಂಡ್ ಸರ್ಕಲ್ ಬಳಿ ಇರುವ ರಿಟರ್ನಿಂಗ್ ಆಫೀಸ್ ಕಚೇರಿಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಜಯನಗರದ ಅಶೋಕ ಪಿಲ್ಲರ್ ಸರ್ಕಲ್ ಬಳಿ ಆತ್ಮೀಯರ ಸಭೆ ನಡೆಸಿ, ರಿಟರ್ನಿಂಗ್ ಆಫೀಸರ್ ಕಚೇರಿಗೆ ಪಾದಯಾತ್ರೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.