ಈಗ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದ್ದು, ರಾಜ್ಯದ ಕೆಲವೆಡೆ ಬೆಳಗ್ಗೆ 10 ಗಂಟೆಯಾದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇನ್ನು ಬೆಂಗಳೂರಿನಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ. ಈ ನಡುವೆಯೇ ರಾಜ್ಯದ ಕೆಲವೆಡೆ ಮಿಂಚು ಗುಡಗು ಸಹಿತ ಮಳೆಯಾಗುತ್ತಿದೆ. ಹಾಗೆಯೇ, ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರಕ್ರಿಯೆ ಶುರುವಾಗಿರುವ ಹಿನ್ನೆಲೆ, ಶ್ರೀಲಂಕಾದ ದಕ್ಷಿಣ ಭಾಗದಿಂದ ತಮಿಳುನಾಡಿನ ಉತ್ತರ ಕರಾವಳಿ ಕಡೆಗೆ ಸೀ ಟ್ರಫ್ ಹಾಯುತ್ತಿದೆ. ಹೀಗಾಗಿ, ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಯಲ್ಲಿ ಜನವರಿ 11ರಂದು ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನದಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಭಾಗಗಳಲ್ಲಿ ಬೆಳಗ್ಗೆ ಮಂಜು ಮುಸುಕಿದ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ರಾಜ್ಯದಲ್ಲಿ ಜನವರಿಯಿಂದ ಮಾರ್ಚ್ ತಿಂಗಳವರೆಗೆ 70% ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಜನವರಿ 1 ಮತ್ತು 8ರ ನಡುವೆ ಕರ್ನಾಟಕದಲ್ಲಿ ಸಾಮಾನ್ಯ 0.6 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 6.3 ಮಿಲಿ ಮೀಟರ್ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಮತ್ತು ತಿರುಚ್ಚಿರಾಪಳ್ಳಿ ನಡುವೆ ವಿಶೇಷ ರೈಲು ಸಂಚಾರ
ದೆಹಲಿಯಲ್ಲಿ ಚಳಿಯ ಅಬ್ಬರ
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಚಳಿಯ ಅಬ್ಬರ ಹೆಚ್ಚಾಗಿದೆ. ವಾಯವ್ಯ ಭಾರತದ ರಾಜ್ಯಗಳಲ್ಲಿ ತೀವ್ರವಾದ ತಂಪು ವಾತಾವರಣ ತುಂಬಿದೆ ಈ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಸಹ ನೀಡಿದೆ.
“ಜನವರಿ 11ರಿಂದ ವಾಯವ್ಯ ಭಾರತದಲ್ಲಿ ಶೀತ ವಾತಾವರಣ ಮತ್ತು ತೀವ್ರತರವಾದ ಚಳಿಯ ಅಬ್ಬರ ಕಡಿಮೆಯಾಗಲಿದೆ. ದೆಹಲಿಯಲ್ಲಿಯೂ ಕೂಡ ಚಳಿಯಿಂದ ಜನರಿಗೆ ಮುಕ್ತಿ ದೊರಕಲಿದೆ. ಆದರೆ, ಮುಂದಿನ ನಾಲ್ಕೈದು ದಿನ ಬೆಳಗ್ಗೆ ಮತ್ತು ರಾತ್ರಿ ದಟ್ಟವಾದ ಮಂಜು ಇರಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಪ್ರದೇಶದಲ್ಲಿ ಸದ್ಯ ಕನಿಷ್ಠ ತಾಪಮಾನ 5-10 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ” ಎಂದು ಹವಾಮಾನ ಇಲಾಖೆ ಹೇಳಿದೆ.
ತಮಿಳುನಾಡಿನಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾದರೆ ಇನ್ನೂ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಲಕ್ಷದ್ವೀಪ, ತೆಲಂಗಾಣ, ಕರ್ನಾಟಕ ಮತ್ತು ಛತ್ತೀಸ್ಗಢದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಹರಿಯಾಣ, ಪಂಜಾಬ್ ಮತ್ತು ಉತ್ತರ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಶೀತ ವಾತಾವರಣ ಕಂಡುಬರಲಿದೆ.
ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಒಡಿಶಾ ಮತ್ತು ತ್ರಿಪುರದಲ್ಲಿ ದಟ್ಟವಾದ ಮಂಜು ಉಂಟಾಗಬಹುದು.