ರಾಜ್ಯ ರಾಜಧಾನಿ ಬೆಂಗಳೂರಿನ ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಲೇತುವೆ)ಗೆ ಅಳವಡಿಸಲಾಗಿದ್ದ ವಯಾಡಕ್ಟ್ ದುರಸ್ಥಿ ಕಾರ್ಯ ಕೈಗೊಳ್ಳುವ ಹಿನ್ನೆಲೆ, ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಆಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದ್ದು, ವಯಾಡಕ್ಟನ ಸಮಗ್ರತೆಯ ಪರಿಶೀಲನೆಯನ್ನು ನಡೆಸಲು ಲೋಡ್ ಟೆಸ್ಟಿಂಗ್ ಮಾಡಬೇಕಾಗಿರುವುದರಿಂದ ಪೀಣ್ಯ ಎಲಿವೇಟೆಡ್ ಫ್ಲೈಓವರ್ ರಸ್ತೆಯಲ್ಲಿ ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಬೇಕೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಸಲ್ಲಿಸಿದೆ. ಈ ಹಿನ್ನೆಲೆ, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎಲ್ಲ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಪರ್ಯಾಯ ವ್ಯವಸ್ಥೆ
ಪ್ರಯಾಣಿಕರು ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ಹತ್ತಿರ ಫ್ಲೈಓವರ್ ಪಕ್ಕದ ಎನ್‍ಎಚ್-4 ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆಯ ಜಂಕ್ಷನ್ ಮೂಲಕ ಎಸ್‍ಆರ್‌ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.
ಸಿಎಂಟಿಐ ಜಂಕ್ಷನ್‍ನಿಂದ ನೆಲಮಂಗಲ ಕಡೆಗೆ ಫ್ಲೈಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈಓವರ್ ಪಕ್ಕದ ಎನ್.ಎಚ್-4 ಸರ್ವಿಸ್ ರಸ್ತೆಯಲ್ಲಿ ಎಸ್‍ಆರ್‌ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಹಾಗೂ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.