ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್‌ನ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ಮಾತ್ರ 150 ಕೋಟಿ ರೂ. ಇದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬರಗಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವಾಗಿ ಕಾಂಗ್ರೆಸ್ ಸರ್ಕಾರ 100 ಕೋಟಿ ರೂ.ಬಿಡುಗಡೆಗೊಳಿಸುತ್ತಿದೆ. ನ್ಯಾಯವಾಗಿ 3-4 ಸಾವಿರ ಕೋಟಿ ರೂ. ನೀಡಬೇಕಿತ್ತು. ಈಗ ಗ್ಯಾರಂಟಿ ಜಾರಿ ಸಮಿತಿಯ 3 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ 25 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಅಂದರೆ ಐದು ವರ್ಷಕ್ಕೆ 150 ಕೋಟಿ ರೂ. ಆಗಲಿದೆ. ಕಾಂಗ್ರೆಸ್ ಚೇಲಾಗಳಿಗೆ ಮಜಾ ಮಾಡಲು ಇಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ. ಸರ್ಕಾರ ರೈತರಿಗೆ ಯಾವಾಗ ಕ್ಯಾಬಿನೆಟ್ ದರ್ಜೆಯ ಗೌರವ ಕೊಟ್ಟು ಪರಿಹಾರ ನೀಡಲಿದೆ” ಎಂದು ಪ್ರಶ್ನಿಸಿದರು.
“ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾರ್ಯಕರ್ತರಿಗೆ ಬಿರಿಯಾನಿ, ಮಟನ್ ಊಟ ಹಾಕಲು ಹಣವಿದೆ. ಇದೇ ಹಣವನ್ನು ಶಾಲೆಗಳಿಗೆ ಕೊಡಬಹುದು. ಗ್ಯಾರಂಟಿ ನಿರ್ವಹಣೆಗೆ ಬೇಕಿದ್ದರೆ ಅಧಿಕಾರಿಗಳನ್ನು ಬಳಸಿಕೊಳ್ಳಲಿ. ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ತಂತ್ರಾಂಶ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಗಮನಹರಿಸಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
“ಕಾಂಗ್ರೆಸ್‌ನವರ ದುರ್ಬುದ್ಧಿ ಹಿಂದೆಯೇ ಕಂಡಿದ್ದೇವೆ. ರಾಮಾಯಣ ಕಾಲ್ಪನಿಕ, ರಾಮನೇ ಇಲ್ಲ ಎಂದು ಅವರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಲಕ್ಷಾಂತರ ದಾಖಲೆಗಳು ಸಿಗುತ್ತದೆ. ಆದರೂ ರಾಮನ ಜನ್ಮ ಪ್ರಮಾಣಪತ್ರವನ್ನು ಕೇಳಿ ಪಾಪ ಕಟ್ಟಿಕೊಂಡ ಕಾಂಗ್ರೆಸ್ ನಾಯಕರು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬರದೇ ಇರುವುದು ಲೇಸು. ಲಾಲ್‌ಕೃಷ್ಣ ಅಡ್ವಾಣಿಯವರು ಮಂದಿರ ಕಟ್ಟಲು ಹೋರಾಟ ನಡೆಸಿದಾಗ ಅವರನ್ನು ಕಾಂಗ್ರೆಸ್ ನಾಯಕರು ಹಾಗೂ ಲಾಲೂ ಪ್ರಸಾದ್ ಯಾದವ್ ಜೈಲಿಗೆ ಕಳುಹಿಸಿದ್ದರು. ಆಗ ಜೈಲಿಗೆ ಕಳಿಸಿ ಈಗ ಅವರ ಪರ ಮಾತನಾಡುವ ಈ ನಾಯಕರಿಗೆ ಎರಡು ನಾಲಿಗೆ ಇದೆಯೇ” ಎಂದು ಪ್ರಶ್ನೆ ಮಾಡಿದರು.
ಶಿಕ್ಷಕರ ಅಹವಾಲು ಆಲಿಸಿದ ಪ್ರತಿಪಕ್ಷ ನಾಯಕ
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟಿಸುತ್ತಿದ್ದ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಅಹವಾಲುಗಳನ್ನು ಆರ್.ಅಶೋಕ ಆಲಿಸಿದರು.
ನಂತರ ಮಾತನಾಡಿದ ಅವರು, “ಕಾಂಗ್ರೆಸ್ ನಾಯಕರು ಮತಕ್ಕಾಗಿ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲ ಬಗೆಯ ನೇಮಕಾತಿಗಳನ್ನು ಮಾಡುತ್ತೇವೆ ಎಂದು ಹೇಳಿದ್ದರು. ಗೆದ್ದ ನಂತರ ಈಗ ಕೈ ಕೊಟ್ಟಿದ್ದಾರೆ. ಕೈ ಕೊಡುವುದರಲ್ಲೇ ಇವರು ಪರಿಣತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದಂತೆಯೇ ನಡೆಯಬೇಕಿತ್ತು. ಹೊರಗುತ್ತಿಗೆ ಶಿಕ್ಷಕರಿಗೆ ಮೊದಲಿನಂತೆ ನೇರ ಸಂಬಳ ನೀಡುವ ಬೇಡಿಕೆಯನ್ನು ನಾನು ಕೂಡ ಬೆಂಬಲಿಸುತ್ತೇನೆ” ಎಂದರು.
ರೈತರ ಬಗ್ಗೆ ಎಲ್ಲಿಲ್ಲದ ಪ್ರೀತಿ ಬಂದುಬಿಟ್ಟಿದೆ ಮಾಜಿ ಮಂತ್ರಿಗಳಿಗೆ,,, ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆ ವಿರುದ್ಧ ಹೈವೇಯಲ್ಲಿ ಒಂದು ವರ್ಷ ರೈತರು ಪ್ರಾಣ ಕಳೆದುಕೊಂಡಿದ್ದಾರೆ,,,ಆಗ ರೈತರ ನೆನಪಾಗಲಿಲ್ಲ,,, ನಿಮ್ಮದೇ ಕೇಂದ್ರ ಸರ್ಕಾರಕ್ಕೆ ಬುದ್ಧಿ ಹೇಳಿದ್ದರೆ ರೈತರ ಪ್ರಾಣ ಉಳಿಸಬಹುದಿತ್ತು,, ಅಧಿಕಾರ ಹೋದ ನಂತರ ಜನಸಾಮಾನ್ಯರ ಮೇಲೆ ಪ್ರೀತಿ ಉಕ್ಕಿ ಹರಿಯುವದು,,, ಅಧಿಕಾರ ಇರುವಾಗ ಬರೀ ಬಾಚಿಕೊಳ್ಳುವುದಷ್ಟೇ ದಂಧೆ