ರಾಯಚೂರು ಮಾವಿನಕೆರೆ ಅಭಿವೃದ್ಧಿ ಕುರಿತು, ಕೆರೆಯ ಒಳಗೆ ಇರುವ ಜಮೀನು ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಕೆರೆಗೆ ಒಳಪಡುವ ಖಾಸಗಿ ಜಮೀನುಗಳ ಮಾಲೀಕರು ಜಮೀನು ಬಿಟ್ಟು ಕೊಡದೇ ಇರುವುದರಿಂದ ಸಭೆ ಯಾವುದೇ ಫಲಪ್ರದವಾಗಲಿಲ್ಲ. ಮಾವಿನ ಕೆರೆ ಅಭಿವೃದ್ಧಿಗೆ ಸಹಕರಿಸುತ್ತೇವೆ. ಆದರೆ, ಜಮೀನು ಬಿಡಲು ಸಾಧ್ಯವಿಲ್ಲ ಎಂದು ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಾವಿನಕೆರೆ ಅತ್ಯಂತ ಹಳೆದ ಕೆರೆಯಾಗಿದ್ದು, ಜನರು ಇಲ್ಲಿಗೆ ಬೆಳಗ್ಗೆ ಮತ್ತು ಸಂಜೆ ವಿಶ್ರಾಂತಿಗಾಗಿ ಆಗಮಿಸುತ್ತಾರೆ. ಮಾವಿನ ಕೆರೆ ಅಭಿವೃದ್ಧಿ ಪಡೆಸಲು ಸಿದ್ದತೆ ನಡೆಸಲಾಗುತ್ತಿದೆ, ಸುತ್ತಲೂ ಒತ್ತುವರಿಯಾಗುತ್ತಿದ್ದು, ಅದನ್ನು ತೆರವುಗೊಳಿಸುವುದರ ಜೊತೆಗೆ ಮಾವಿನ ಕೆರೆಯಲ್ಲಿ ಖಾಸಗಿ ಜಮೀನುಗಳಿದ್ದು, ಅಭಿವೃದ್ಧಿಗೆ ಬಿಟ್ಟು ಕೊಡಲು ಜಿಲ್ಲಾಧಿಕಾರಿ ಸೂಚಿಸಿದರು. ಮಾವಿನ ಕೆರೆಯ ಒಟ್ಟು ವಿಸ್ತೀರ್ಣದಲ್ಲಿ ಹತ್ತು ಎಕರೆ ಒಂದು ಗುಂಟೆ ಖಾಸಗಿ ಜಮೀನು ಇದೆ, ಸರ್ಕಾರದ ಯಾವುದೇ ಅಭಿವೃದ್ಧಿಗೆ ಅಡ್ಡಿಪಡಿಸದೇ ಬಿಟ್ಟಕೊಡಬೇಕು ಎಂದರು.
ಈ ವೇಳೆ ಮಾಲೀಕರು, ಮಾವಿನಕೆರೆಯಲ್ಲಿ ಇರುವ ಆಸ್ತಿಯು ಸುಮಾರು ಹಿಂದಿನಿಂದಲೂ ಉಳಿಸಿಕೊಂಡು ನಮ್ಮ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಂಡು ಇಲ್ಲಿಯೇ ವಾಸ ಮಾಡಲು ಮುಂದಾಗಿದ್ದೇವೆ. ಸುಮಾರು 60 ಕುಟುಂಬಗಳು ಬೇರೆ ಬೇರೆ ಕಡೆವಾಸವಿದ್ದು, ಸ್ವಂತ ಮನೆಗಳಿಲ್ಲ, ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸ್ವಂತ ಆಸ್ತಿ ಎಂದು ಇರುವದು ಇದು ಒಂದೆ. ಎಲ್ಲಾ ಕುಟುಂಬಗಳು ಸ್ವಂತ ಮನೆ ನಿರ್ಮಿಸಿ ಇಲ್ಲಿಯೇ ವಾಸ ಮಾಡಲು ಸಿದ್ಧರಿದ್ದೇವೆ. ಮಾವಿನ ಕೆರೆ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಆದರೆ, 10 ಎಕರೆ 1 ಗುಂಟೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದರು.
ಸರ್ಕಾರದ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ, ನಮ್ಮ ಎಲ್ಲರ ಕುಟುಂಬಗಳು ಸಹಕಾರ ನೀಡಲು ಸಿದ್ದ, ಅಭಿವೃದ್ಧಿ ಕೆಲಸಗಳು ನಮಗೂ ಬೇಕಾಗಿದೆ. ಆದರೆ, ನಮ್ಮ ಜಮೀನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಹೆಬೂಬಿ, ನಗರಾಭಿವೃದ್ಧಿ ಕೊಶ ಅಧಿಕಾರಿ ಜಗದೀಶ ರಂಗಣ್ಣನವರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಐಎಎಸ್ ಅಧಿಕಾರಿ ಸಾಹಿತ್ಯ ಸೇರಿದಂತೆ ಅಧಿಕಾರಿಗಳು, ಜಮೀನು ಮಾಲೀಕರು ಸಭೆಯಲ್ಲಿ ಇದ್ದರು.