ಪಾಂಡವಪುರದಲ್ಲಿ ಜಾರಿ ಮಾಡಲಾಗಿದ್ದ ನಿಷೇಧಾಜ್ಞೆ ಉಲ್ಲಂಘಿಸಿ 2017ರಲ್ಲಿ ಬೈಕ್ ರ್‍ಯಾಲಿ ನಡೆಸಿದ್ದ ಪ್ರಕರಣದಲ್ಲಿ 17 ಮಂದಿ ಬಿಜೆಪಿ ಕಾರ್ಯಕರ್ತರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಪಾಂಡವಪುರದ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
2017ರಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಬಿಜೆಪಿಗರು ಪಾಂಡವಪುರದಿಂದ ಮಂಗಳೂರಿನ ಬೈಕ್ ರ್‍ಯಾಲಿ ಹೊರಟ್ಟಿದ್ದರು. ಆದರೆ, ಈ ಸಮಯದಲ್ಲಿ ಪಾಂಡವಪುರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ರ್‍ಯಾಲಿ ನಡೆಸಿದ್ದವರನ್ನು ತಡೆದಿದ್ದ ಪೊಲೀಸರು, 17 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ಅನ್ನೂ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಪಾಂಡವಪುರ ನ್ಯಾಯಲಯ ಕೈಗೆತ್ತಿಕೊಂಡಿತ್ತು. ಆದರೆ, ಆರೋಪಿಗಳು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಇದೀಗ, ಬಿಜೆಪಿಯ ಆರೋಪಿ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಬಿಜೆಪಿ ಕಾರ್ಯಕರ್ತರಿಗೆ ಸಮನ್ಸ್ ಜಾರಿ ಮಾಡಿರುವುದನ್ನು ಬಿಜೆಪಿ ಖಂಡಿಸಿದೆ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆರು ವರ್ಷಗಳಿಂದ ಇಲ್ಲದ ಸಮನ್ಸ್ ಈಗ ಯಾಕೆ. ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.