ಪತ್ರಕರ್ತರೋರ್ವರು ಆರ್‌ಟಿಐ ಮೂಲಕ ಕೇಳಿದ್ದ ಮಾಹಿತಿ ನೀಡಲು ನಿರಾಕರಿಸಿದ ಆರೋಪದ ಮೇಲೆ ತಮ್ಮ ಮೇಲೆ ಮಾಹಿತಿ ಆಯೋಗ ದಂಡ ವಿಧಿಸಿದ್ದ ಪ್ರಕರಣವನ್ನು ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದ ವಾರ್ತಾಧಿಕಾರಿಯೋರ್ವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ದಂಡ ವಿಧಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ.
2013ರಲ್ಲಿ ರೋಹಿಣಿ ಕೆ ಅವರು ದ. ಕ. ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದಾಗ ಪತ್ರಕರ್ತ ಇಕ್ಬಾಲ್ ಕುತ್ತಾರ್ ಎಂಬುವವರು ಇಲಾಖೆಯು ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರೌಢಶಾಲಾ ಗಿರಿಜನ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದ ಖರ್ಚು ವೆಚ್ಚಗಳ ವಿವರ ಕೋರಿ ಮಾಹಿತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಮಾಹಿತಿ ನೀಡದೆ ನಿರಾಕರಿಸಿದ್ದ ವಾರ್ತಾಧಿಕಾರಿ ರೋಹಿಣಿ ವಿರುದ್ಧ ಇಕ್ಬಾಲ್ ಕುತ್ತಾರ್ ರಾಜ್ಯ ಮಾಹಿತಿ ಆಯೋಗದಲ್ಲಿ ದೂರು ಸಲ್ಲಿಸಿದಾಗ, ತನಿಖೆ ನಡೆಸಿದ ಆಯೋಗ ಮಾಹಿತಿ ನಿರಾಕರಿಸಿರುವುದು ಸರಿಯಲ್ಲವೆಂದು ರೋಹಿಣಿ ಅವರಿಗೆ ದಂಡ ವಿಧಿಸಿ ಆದೇಶ ನೀಡಿತ್ತು.
ಮಾಹಿತಿ ಆಯೋಗದ ಈ ಆದೇಶವನ್ನು ಸಂವಿಧಾನದ ಕಲಂ 226 ಮತ್ತು 227ರ ಪ್ರಕಾರ ರದ್ದುಪಡಿಸುವಂತೆ ರೋಹಿಣಿ ಅವರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿ 2015ರಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯೋಗ ಹಾಗೂ ಇಕ್ಬಾಲ್ ಕುತ್ತಾರ್ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಕಳೆದ ಎಂಟು ವರ್ಷಗಳಿಂದ ಫಿರ್ಯಾದುದಾರರು ಹಾಗೂ ಪ್ರತಿವಾದಿಗಳ ವಾದ ಪ್ರತಿವಾದಗಳನ್ನು ಆಲಿಸಿದ ರಾಜ್ಯ ಹೈಕೋರ್ಟ್, ಈ ಪ್ರಕರಣದಲ್ಲಿ ಇದೀಗ ಮಹತ್ವದ ಆದೇಶ ನೀಡಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ‘ಕೈ’ಗೆ ಸಿಗುತ್ತಿದ್ದಂತೆ ರಾಮ ರಾಜ್ಯ ತುಘಲಕ್ ರಾಜ್ಯವಾಗಿ ಬದಲಾಗಿದೆ: ಬಿಜೆಪಿ ವಾಗ್ದಾಳಿ
ಪ್ರಕರಣದಲ್ಲಿ ಫಿರ್ಯಾದುದಾರರ ಅರ್ಹತೆಯ ಕೊರತೆಯಿದ್ದು, ರಾಜ್ಯ ಮಾಹಿತಿ ಆಯೋಗದ ಆದೇಶ ರದ್ದುಪಡಿಸಲು ಯೋಗ್ಯವಲ್ಲವೆಂದು ಮನಗಂಡಿದೆ. ಅಲ್ಲದೆ ವಾರ್ತಾಧಿಕಾರಿ ರೋಹಿಣಿ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿ, ಪ್ರಕರಣದಲ್ಲಿ ಮಾಹಿತಿ ನಿರಾಕರಿಸಲ್ಪಟ್ಟು ಆಯೋಗಕ್ಕೆ ದೂರು ಸಲ್ಲಿಸಿ ದಂಡನೆ ವಿಧಿಸಲು ಕಾರಣರಾದ ಇಕ್ಬಾಲ್ ಕುತ್ತಾರ್ ಅವರಿಗೆ ರೋಹಿಣಿ ಅವರು ಒಂದು ತಿಂಗಳೊಳಗಾಗಿ 25 ಸಾವಿರ ರೂ. ದಂಡವನ್ನು ನೀಡುವಂತೆ ನ್ಯಾಯಮೂರ್ತಿ ಆರ್. ನಟರಾಜ್ ತೀರ್ಪು ನೀಡಿರುವುದು ಹೈಕೋರ್ಟ್ ಆದೇಶದಲ್ಲಿ ಪ್ರಕಟವಾಗಿದೆ.