ಕೇಂದ್ರ ಸರ್ಕಾರ ಹೊಸದಾಗಿ ಆದೇಶಿಸಿರುವ ಭಾರತೀಯ ನ್ಯಾಯ ಸಂಹಿತೆ ಹಿಟ್ ಆ್ಯಂಡ್ ರನ್ ಪ್ರಕರಣಗಳ ಸೆಕ್ಷನ್‌ಗಳನ್ನು ರದ್ದು ಮಾಡಿ, ಇಲ್ಲವೇ ತಿದ್ದುಪಡಿ ಮಾಡಿ ಹೊಸದಾಗಿ ಕಾಯಿದೆ ಜಾರಿಗೆ ತರುವಂತೆ ದಾವಣಗೆರೆ ಲಾರಿ ಮಾಲೀಕರ ಸಂಘ, ಮಾಲೀಕರು, ಚಾಲಕರು, ಚಾಲಕರ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮತ್ತು ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಪವನ್ ಕುಮಾರ್, ಇದೇ ತಿಂಗಳ 17ರೊಳಗೆ ಸೆಕ್ಷನ್ 106/1, 106/2 ಸೆಕ್ಷನ್ ಕಾಯಿದೆಯನ್ನು ವಾಪಾಸು ಪಡೆಯಬೇಕು. ಇಲ್ಲವಾದರೆ ಜ.17ರಿಂದ ಲಾರಿ, ಬಸ್ಸುಗಳ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭಾರತೀಯ ನ್ಯಾಯ ಸಂಹಿತೆ 106/1, 106/2ರ ಪ್ರಕಾರ ಅಪಘಾತವಾದಲ್ಲಿ, ಮೃತ ಪಟ್ಟರೆ ಚಾಲಕನಿಗೆ 5ರಿಂದ 10ವರ್ಷದ ವರೆಗೆ ಸೆರೆವಾಸ ಮತ್ತು 7ಲಕ್ಷ ದಂಡ ಕಟ್ಟಬೇಕಾಗುತ್ತದೆ. ಹಳೆಯ ಐಪಿಸಿ ಸೆಕ್ಷನ್ 304ಎ ಪ್ರಕಾರ ಚಾಲಕರಿಗೆ ಇದೇ ರೀತಿ ಅಪಘಾತ ಸಂಭವಿಸಿದಲ್ಲಿ ಮೃತ ಪಟ್ಟರೆ 2 ವರ್ಷದ ವರೆಗೆ ಮಾತ್ರ ಸೆರೆವಾಸ ಇದೆ. ಕಾರಣ ಹೊಸದಾಗಿ ಜಾರಿಗೆ ತರಲಾದ ಸೆಕ್ಷನ್‌ಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ದೇಶದ ಶೇ.70ರಷ್ಟು ಜೀವನ ನಡೆಯುತ್ತಿರುವುದು ಲಾರಿ ಚಾಲಕರು ಮತ್ತು ಮಾಲೀಕರಿಂದ, ಪ್ರಸ್ತುತ ಶೇ.27ರಷ್ಟು ಚಾಲಕರ ಕೊರತೆಯನ್ನು ಭಾರತ ದೇಶ ಎದುರಿಸುತ್ತಿದೆ. ಇಂತಹ ವೇಳೆ ಕೇಂದ್ರ ಸರ್ಕಾರ ದಿಢೀರನೆ ಹೊಸ ಕಾನೂನನ್ನು ಜಾರಿಗೆ ತಂದು ಲಾರಿ ಮಾಲಿಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವೇಳೆ ಹಿಂಪಡೆಯದಿದ್ದಲ್ಲಿ ಇದೇ 17ರಿಂದ ಕರ್ನಾಟಕ ಲಾರಿ ಮಾಲೀಕರ ಸಂಘದವರು ಕರೆದಿರುವ ಮುಷ್ಕರಕ್ಕೆ ದಾವಣಗೆರೆ ಲಾರಿ ಮಾಲೀಕರ ಸಂಘ, ದಾವಣಗೆರೆ ಜಿಲ್ಲಾ ಮಿನಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘ, ದಾವಣಗೆರೆ ಮಂಡಕ್ಕಿ, ಬಟ್ಟೆ ಲಾರಿ ಮಾಲೀಕರ ಸಂಘ, ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ, ಬಾತಿ ಗೂಡ್ ಶೆಡ್ ಲಾರಿ ಮಾಲೀಕರ ಸಂಘ, ದಾವಣಗೆರೆ ಡ್ರೈವರ್ಸ್ ಸಂಘ, ಬಾತಿ ಡ್ರೈವರ್ಸ್ ಕ್ಷೇಮಾಭಿವೃದ್ಧಿ ಸಂಘಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಎಸ್.ವಿ.ಮಹಾನಂದಸ್ವಾಮಿ, ಖಾಸಿಂಸಾಬ್, ವಿ.ಬಸವರಾಜ್, ಸಿದ್ದನಗೌಡ, ದಿನೇಶ್, ಇಸ್ಮಾಯಿಲ್ ಸಾಬ್, ಮೃತ್ಯುಂಜಯ, ಪ್ರದೀಪ್ ಇತರರು ಇದ್ದರು.