ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ

Date:

Advertisements
ಭಾರತೀಯರು ಸಿನಿಮಾವನ್ನು ಸಿನಿಮಾವಾಗಿ, ಮನರಂಜನೆಯಾಗಿಯಷ್ಟೇ ನೋಡಲು ಕಲಿತ ದಿನ ಈ ಎಲ್ಲ ರಗಳೆಗಳು ನಿಲ್ಲುತ್ತವೆ. ಅನ್ನಪೂರ್ಣಿ ಪಾತ್ರ ಅರ್ಚಕರ ಮಗಳು; ಆಕೆ ಮಾಂಸಾಹಾರ ತಯಾರಿಸುವುದು, ಸೇವಿಸುವುದು ಹಿಂದೂಗಳ ಭಾವನೆಗೆ ಧಕ್ಕೆ ಹೇಗಾಗುತ್ತದೆ? ಒಬ್ಬ ಬ್ರಾಹ್ಮಣ ವ್ಯಕ್ತಿಗೆ ಬಲವಂತವಾಗಿ ಮಾಂಸಾಹಾರ ತಿನ್ನಿಸಲಾಗಿದೆ ಎಂಬಂತೆ ಭ್ರಮಿಸುವುದು ಹುಚ್ಚುತನ

 

ಭಿನ್ನ ಧರ್ಮಗಳ ಗಂಡು ಹೆಣ್ಣಿನ ನಡುವಿನ ಸಹಜ ಪ್ರೀತಿ, ಮದುವೆಗೆ ಇತ್ತೀಚೆಗೆ ಹಿಂದೂ ಮೂಲಭೂತವಾದಿಗಳು ಇಟ್ಟ ಕೆಟ್ಟ ಹೆಸರು ಲವ್‌ ಜಿಹಾದ್‌“. ಭಾರತದ ಕಾನೂನು ಪುಸ್ತಕಗಳಲ್ಲಿ ಇಲ್ಲದಿರುವ ಪದವಿದು. ಈ ಬಗ್ಗೆ ಯಾವುದೇ ತನಿಖಾ ಸಂಸ್ಥೆಯಡಿ ದೂರು ದಾಖಲಾಗಿಲ್ಲ ಎಂದು ಹಿಂದೊಮ್ಮೆ ಮೋದಿ ಸರ್ಕಾರವೇ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿತ್ತು. ಆದರೆ, ಕೋಮುವಾದಿ ಸಂಘಟನೆಗಳು ಈ ಹೆಸರಿನಡಿ ನಡೆಸುತ್ತಿರುವ ದಾಂಧಲೆಗೆ ಕಡಿವಾಣ ಬಿದ್ದಿಲ್ಲ.

ಅಷ್ಟೇ ಅಲ್ಲ, ಸನಾತನ ಮನಸ್ಥಿತಿಯ ಒಂದು ಸಮೂಹ ಬ್ರಾಹ್ಮಣೇತರರ ವಿರುದ್ಧ ಆಹಾರ ರಾಜಕಾರಣವನ್ನು ಶುರು ಮಾಡಿವೆ. ದನದ ಮಾಂಸ ಸೇವನೆಯ ಮೇಲೆ ಗದಾಪ್ರಹಾರ, ಮಾಂಸಾಹಾರ ತುಚ್ಛ, ಸಸ್ಯಾಹಾರ ಶ್ರೇಷ್ಠ ಎಂಬ ಹೇಳಿಕೆಗಳು, ಆ ಹೆಸರಿನ ರಾಜಕಾರಣ, ಹಬ್ಬಗಳ ದಿನ ಮಾಂಸಾಹಾರ ಮಾರಾಟವನ್ನೇ ನಿಷೇಧ ಮಾಡುವ ಮೂಲಕ ಬಡವರ, ಮಾಂಸಾಹಾರಿಗಳ ಮೂಲಭೂತ ಹಕ್ಕಿನ ಮೇಲೆ ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳೇ ನಡೆಸುತ್ತಿದೆ. ಬಹುಸಂಖ್ಯಾತ ಹಿಂದೂಗಳ ಮೇಲೆ ಅದೇ ಹಿಂದೂ ಧರ್ಮದ ಜಾತಿಶ್ರೇಷ್ಠತೆ ವ್ಯಸನಿಗಳು ನಡೆಸುತ್ತಿರುವ ಶೋಷಣೆಗೆ ಕಡಿವಾಣವೇ ಇಲ್ಲದಂತಾಗಿದೆ. ಇಂತಹ ಮನಸ್ಥಿತಿಗಳೇ ಗೋಮಾಂಸ ರಫ್ತುದಾರರ ಬಗ್ಗೆ ಮೌನವಾಗಿದ್ದು, ಮಾರುಕಟ್ಟೆಯಿಂದ ಒಂದು ಕೇಜಿ ಮಾಂಸ ಮನೆಗೆ ಕೊಂಡೊಯ್ಯುವ ಬಡಪಾಯಿಯನ್ನು ಬಹಿರಂಗವಾಗಿ ಜಜ್ಜಿ ಸಾಯಿಸುತ್ತಿವೆ. ಗೋರಕ್ಷಕರ ಹೆಸರಿನಲ್ಲಿ ಬಡ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿವೆ.

ಈ ಆಹಾರ ರಾಜಕಾರಣ ಮತ್ತು ಕಪೋಲ ಕಲ್ಪಿತ ಲವ್‌ ಜಿಹಾದ್‌ನ ಬಲಿ ಪಶುವಾಗಿ ಈಗ ನಮ್ಮ ಮುಂದೆ ‘ಅನ್ನಪೂರ್ಣಿ’ ಇದ್ದಾಳೆ. ಡಿಸೆಂಬರ್‌ 1ರಂದು ಬಿಡುಗಡೆಯಾದ, ನಯನತಾರಾ ಅಭಿನಯದ ತಮಿಳಿನ ‘ಅನ್ನಪೂರ್ಣಿ’ ಸಿನಿಮಾವು ಬ್ರಾಹ್ಮಣ ಸಂಪ್ರದಾಯಸ್ಥ ಮಹಿಳೆಯೊಬ್ಬಳು ಭಾರತದ ‘ನಂಬರ್‌ ವನ್ ಶೆಫ್’ (ನಂಬರ್ ವನ್ ಬಾಣಸಿಗಳು) ಆಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ಪಾತ್ರಧಾರಿ ಅನ್ನಪೂರ್ಣಿ ಮಾಂಸಾಹಾರ ಅಡುಗೆ ಮಾಡುವುದು, ಸೇವನೆ ಮಾಡುವುದು ಹಾಗೂ ಆಕೆಯ ಮುಸ್ಲಿಂ ಸ್ನೇಹಿತ ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳುವ ದೃಶ್ಯಗಳ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

Advertisements

ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಧಕ್ಕೆಯಾಗಿದೆ ಎಂದು ರಮೇಶ್ ಸೋಲಂಕಿ ಎಂಬುವವರು ನಟಿ ನಯನತಾರ, ಈ ಸಿನೆಮಾದ ನಿರ್ಮಾಪಕರು, ನಿರ್ದೇಶಕರು ಹಾಗೂ ನೆಟ್‌ಫ್ಲಿಕ್ಸ್ ಒ.ಟಿ.ಟಿ. ವೇದಿಕೆಯನ್ನು ಒಳಗೊಂಡು ಸಿನಿಮಾ ತಂಡದ ಎಂಟು ಮಂದಿಯ ವಿರುದ್ಧ ಜನವರಿ 8ರಂದು ಮುಂಬೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಒಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಇದೀಗ ಅನ್ನಪೂರ್ಣಿ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿದೆ. ಸಹನಿರ್ಮಾಪಕರಾದ ಜೀ ಸಿನಿಮಾಸ್‌ ಆರೆಸ್ಸೆಸ್‌ ನ ಕ್ಷಮೆ ಕೇಳಿದೆ! “ಸಿನಿಮಾದ ಸಹನಿರ್ಮಾಪಕರಾಗಿರುವ ನಾವು, ಸಿನಿಮಾದ ಕೆಲವು ದೃಶ್ಯಗಳನ್ನು ತಿದ್ದುಪಡಿ ಮಾಡುವವರೆಗೂ ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಿರುತ್ತೇವೆ” ಎಂದು ಝೀ ಸ್ಟುಡಿಯೋಸ್ ತಿಳಿಸಿದೆ.

ಚಿತ್ರದಲ್ಲಿ ಅನ್ನಪೂರ್ಣಿ ‘ಶೆಫ್’ ಆಗಲು ಬಯಸುತ್ತಾರೆ. ಅದಕ್ಕಾಗಿ ಅವರು ಮಾಂಸಾಹಾರವನ್ನು ಬೇಯಿಸಬೇಕು. ಇದು ಅವರ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ. ಆದರೆ ಅನ್ನಪೂರ್ಣಿ ಮಾಂಸಾಹಾರ ಬೇಯಿಸುವುದಷ್ಟೇ ಅಲ್ಲದೆ ಸೇವಿಸುತ್ತಾರೆ. ಬಿರಿಯಾನಿ ಅಡುಗೆ ಮಾಡುವ ಮೊದಲು ನಮಾಜ್ ಮಾಡಲಾಗುತ್ತದೆ. ಇದಕ್ಕೆಲ್ಲ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಗಳು ಚಿತ್ರದಲ್ಲಿ ಫರ್ಹಾನ್ ಮತ್ತು ಅನ್ನಪೂರ್ಣಿಯ ಸಂಬಂಧವನ್ನು ಲವ್ ಜಿಹಾದ್‌ ಎಂದು ಕರೆದಿವೆ.

ಒಂದು ಕಥಾ ಹಂದರ, ಅದರ ಪಾತ್ರಗಳ ನಡವಳಿಕೆ, ವ್ಯಕ್ತಿತ್ವವನ್ನು ಕಾಲ್ಪನಿಕ ಕತೆ ಎಂಬ ಸಹಜ ದೃಷ್ಟಿಯಿಂದ ನೋಡಲಾಗದ ಮನಸ್ಥಿತಿಗಳು ಎಂಥವು?

ಭಾರತೀಯರು ಸಿನಿಮಾವನ್ನು ಸಿನಿಮಾ, ಮನರಂಜನೆಯಾಗಿಯಷ್ಟೇ ನೋಡಲು ಕಲಿತ ದಿನ ಈ ಎಲ್ಲ ರಗಳೆಗಳು ನಿಲ್ಲುತ್ತವೆ. ಅನ್ನಪೂರ್ಣಿ ಪಾತ್ರ ಅರ್ಚಕರ ಮಗಳು. ಆಕೆ ಮಾಂಸಾಹಾರ ತಯಾರಿಸುವುದು ಮತ್ತು ಸೇವಿಸುವುದು ಹಿಂದೂಗಳ ಭಾವನೆಗೆ ಧಕ್ಕೆ ಹೇಗಾಗುತ್ತದೆ? ವಾಸ್ತವದಲ್ಲಿ ಒಬ್ಬ ಬ್ರಾಹ್ಮಣ ವ್ಯಕ್ತಿಗೆ ಬಲವಂತವಾಗಿ ಮಾಂಸಾಹಾರ ತಿನ್ನಿಸಲಾಗಿದೆ ಎಂಬಂತೆ ಭ್ರಮಿಸುವುದು ಹುಚ್ಚುತನ. ಇದು ಜಾತಿ ಶ್ರೇಷ್ಠತೆಯ ವ್ಯಸನದ ಪರಾಕಾಷ್ಠೆಯನ್ನಷ್ಟೇ ತೋರಿಸುತ್ತದೆ.

ನಿಜ ಸಮಾಜದಲ್ಲಿ ಹಿಂದೂ ಮುಸ್ಲಿಂ ವ್ಯಕ್ತಿಗಳ ಸಂಬಂಧವನ್ನು ಸಹಿಸದವರು ಸಿನಿಮಾದ ಪಾತ್ರಗಳ ಬಗ್ಗೆಯೂ ತಕರಾರು ತೆಗೆದು ಲವ್‌ ಜಿಹಾದ್‌ನ ಪ್ರಚಾರ ಮಾಡಲಾಗುತ್ತಿದೆ ಎಂದು ಗದ್ದಲ ಎಬ್ಬಿಸಿರುವುದು ನಾಚಿಕೆಗೇಡಿನ ಸಂಗತಿ. ಸಾಂಸ್ಕೃತಿಕ ಲೋಕ ಆಹಾರ ರಾಜಕಾರಣ, ಕೋಮುದ್ವೇಷ, ಜಾತಿಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗುತ್ತಿರುವುದು ಆರೋಗ್ಯಕರ ಸಮಾಜ ಸಹಬಾಳುವೆಗಳ ದೃಷ್ಟಿಯಿಂದ ನಿರಾಶಾದಾಯಕ ಬೆಳವಣಿಗೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಹಿಂದೂ – ಮುಸ್ಲಿಂ – ಕ್ರೈಸ್ತ … ಈ ಎಲ್ಲ ಧರ್ಮಗಳು ಶ್ರೇಷ್ಠವೆ. ಆದರೆ, ಈ ಎಲ್ಲ ಧರ್ಮಕ್ಕಿಂತಲೂ ಶ್ರೇಷ್ಠವಾದುದು ಮನುಷ್ಯ ಧರ್ಮ. ಮನುಷ್ಯ ಧರ್ಮಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ.
    ಧರ್ಮದ ಹೆಸರಲ್ಲಿ ಕಚ್ಚಾಡದೆ ಬಾಳುವುದೆ ಮನುಷ್ಯ ಧರ್ಮ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X