ರಾಜಧಾನಿ ಬೆಂಗಳೂರಿಗೆ ‘ಉದ್ಯಾನನಗರಿ’ ಎಂಬ ಹೆಸರು ದೂರವಾಗುವ ಸಮಯ ಸನಿಹದಲ್ಲಿದೆ. ಅಭಿವೃದ್ಧಿ, ನಗರೀಕರಣ, ಆಧುನೀಕರಣದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಲೇ ಇದೆ. ಹೀಗೀರುವಾಗ ಬೆಂಗಳೂರಲ್ಲಿ ಕೆಲವರು ಮನೆ ಮುಂಭಾಗ ಇರುವ ಮರಗಳಿಗೆ ಆ್ಯಸಿಡ್ ಹಾಕುತ್ತಿದ್ದಾರೆ.
ಮನೆ ಮುಂಭಾಗ ಮರದ ಎಲೆಗಳು ಬಿದ್ದು, ಗಲೀಜಾಗಿ ಕಾಣಿಸುತ್ತದೆ. ಮರದ ಕೊಂಬೆ ನಮ್ಮ ಮನೆಗೆ ಅಡ್ಡಲಾಗಿದೆ ಎಂದು ಮರಗಳನ್ನು ಕತ್ತರಿಸುವುದು, ಮರಕ್ಕೆ ಆ್ಯಸಿಡ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅಂಥದ್ದೇ ಘಟನೆ ಬೆಂಗಳೂರಿನ ಕೋಟೆ ಕಲಾಸಿಪಾಳ್ಯದ ಬಳಿ ಈ ದುಷ್ಟ ಕೃತ್ಯ ನಡೆದಿದ್ದು, ಮಧ್ಯರಾತ್ರಿ 1.30ರ ಸುಮಾರಿಗೆ ಮರದ ಬುಡಕ್ಕೆ ಆ್ಯಸಿಡ್ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕೋಟೆ ಕಲಾಸಿಪಾಳ್ಯದ ನಿವಾಸಿಗಳಾಗಿರುವ ವಾಸುದೇವ ರಾವ್ ಹಾಗೂ ಬಾಲಕೃಷ್ಣ ಎಂಬುವವರು ಈ ಕೃತ್ಯ ಎಸಗಿರುವುದಾಗಿ ಸ್ಥಳೀಯರು ಆರೋಪಿಸಿದ್ದು, ಸಿಸಿಟಿವಿಯನ್ನು ಪರಿಶೀಲಿಸಿದಾಗ ಇವರ ಕೃತ್ಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು(ಜ.12) ಬೆಳಗ್ಗೆ ಸ್ಥಳೀಯರು ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ವಿಚಾರ ತಿಳಿದ ಕೂಡಲೇ, ‘ಟ್ರೀ ಡಾಕ್ಟರ್’ ಖ್ಯಾತಿಯ ಬೆಂಗಳೂರಿನ ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಅವರನ್ನು ಸ್ಥಳಕ್ಕೆ ಕರೆಸಿ, ಆ್ಯಸಿಡ್ ದಾಳಿಗೊಳಗಾದ ಮರವನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.
ಮನೆಗೆ ಮರ ಅಡ್ಡಿ; ಬುಡಕ್ಕೆ ಆ್ಯಸಿಡ್ ಹಾಕಿದ ದುರುಳರು
ಬೆಂಗಳೂರು ಕೋಟೆ ಕಲಾಸಿಪಾಳ್ಯದ ಬಳಿ ಈ ಕೃತ್ಯ. ಸಿಸಿಟಿವಿಯಲ್ಲಿ ಕೃತ್ಯ ದಾಖಲು; @BBMPCOMMಗೆ ದೂರು
ಹೊಂಗೆ ಮರದ ಬುಡಕ್ಕೆ ಆ್ಯಸಿಡ್. ವಾಸುದೇವ ರಾವ್ ಹಾಗೂ ಬಾಲಕೃಷ್ಣ ಎಂಬವರಿಂದ ಕೃತ್ಯ ಆರೋಪ
ಔಷಧಿ ಸಿಂಪಡಿಸಿದ ‘ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ @vijayvruksha @aranya_kfd pic.twitter.com/0fTgJD1Q5w
— eedina.com (@eedinanews) January 12, 2024
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸ್ಥಳೀಯರಾದ ರಾಜು, “ಕಳೆದ ಎರಡು ಮೂರು ವರ್ಷಗಳ ಹಿಂದೆ ನಮ್ಮ ಪ್ರದೇಶದಲ್ಲಿ ಸ್ಥಳೀಯರೇ ಸೇರಿ ಸುಮಾರು 15ರಿಂದ 20 ಹೊಂಗೆ ಮರಗಳನ್ನು ನೆಟ್ಟಿದ್ದೇವೆ. ಅದಕ್ಕೆ ನೀರು ಹಾಕಿ, ತಡೆಬೇಲಿ ಹಾಕಿ ನಮ್ಮ ಮಕ್ಕಳಂತೆ ಅದನ್ನು ಪೋಷಿಸುತ್ತಿದ್ದೇವೆ. ಆದರೆ, ವಾಸುದೇವ ರಾವ್ ಹಾಗೂ ಬಾಲಕೃಷ್ಣ ಎಂಬುವವರು ರಾತ್ರಿಯ ವೇಳೆ ಬಂದು ಅದರ ಬುಡಕ್ಕೆ ಆ್ಯಸಿಡ್ ಹಾಕಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ಅವರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟಿದ್ದು, ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಇತ್ತ ಮರಕ್ಕೆ ಮತ್ತೆ ಜೀವ ನೀಡುವ ಕೆಲಸವನ್ನು ‘ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ ಮಾಡುತ್ತಿದ್ದಾರೆ. ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಅವರು, “ಎರಡು ಮರಕ್ಕೆ ಸ್ಥಳೀಯರಿಬ್ಬರು ಆ್ಯಸಿಡ್ ಹಾಕುವ ಮೂಲಕ ವಿಷವುಣಿಸಿದ್ದಾಗಿ ಮರವನ್ನು ಪೋಷಿಸುತ್ತಿರುವವರು ಆರೋಪಿಸಿದ್ದಾರೆ. ಇದೇ ರೀತಿಯ ಘಟನೆಗಳು ಈ ಹಿಂದೆ ಕೂಡ ಬೆಂಗಳೂರಿನಲ್ಲಿ ನಡೆದಿತ್ತು. ಕೆಲವನ್ನು ಈಗಾಗಲೇ ಪೋಷಣೆ ಮಾಡಿ ರಕ್ಷಿಸಿದ್ದೇವೆ. ಸಿಸಿಟಿವಿಯಲ್ಲಿ ಆ್ಯಸಿಡ್ ಹಾಕುತ್ತಿರುವುದು ದಾಖಲಾಗಿದೆ ಎಂದು ದೃಶ್ಯಗಳನ್ನು ತೋರಿಸಿದ್ದಾರೆ” ಎಂದು ತಿಳಿಸಿದರು.

“ಘಟನೆಯ ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ನಡೆಸಿದಾಗ ಆ್ಯಸಿಡ್ ರೀತಿಯ ವಸ್ತು ಹಾಕಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಬುಡ ಸ್ವಲ್ಪ ಸುಟ್ಟು ಹೋದಂತಾಗಿದೆ. ಸದ್ಯ ಬುಡಕ್ಕೆ ಔಷಧಿ ಸಿಂಪಡಿಸಿ, ಬುಡಕ್ಕೆ ಮಣ್ಣು ತುಂಬಿದ್ದೇನೆ. ಮರಗಳಿಗೆ ಈ ರೀತಿಯ ದೌರ್ಜನ್ಯ ಎಸಗುವುದು ತಪ್ಪು. ಇಂತಹ ಘಟನೆ ಬೆಳಕಿಗೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ‘ಟ್ರೀ ಡಾಕ್ಟರ್’ ವಿಜಯ್ ನಿಶಾಂತ್ ಸಾರ್ವಜನಿಕರಲ್ಲಿ ವಿನಂತಿಸಿದರು.
ಸುಮಾರು 2 ವರ್ಷದ ಹಳೆಯದಾದ ಹೊಂಗೆ ಮರದ ಬುಡಕ್ಕೆ ಆ್ಯಸಿಡ್ ಹಾಕಿ ಮರ ಒಣಗುವಂತೆ ಮಾಡಲಾಗಿದೆ. ಈ ರೀತಿ ಮರಗಳಿಗೆ ವಿಷವುಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಂದ ಒತ್ತಾಯ ಕೇಳಿ ಬಂದಿವೆ.