“ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಮತ್ತು ವೀಕ್ಷಿಸುವುದು ಪೋಕ್ಸೋ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಲ್ಲ” ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಮಕ್ಕಳ ಅಶ್ಲೀಲ ಚಿತ್ರವನ್ನು ಡೌನ್‌ಲೋಡ್ ಮಾಡಿ ವೀಕ್ಷಿಸುತ್ತಿದ್ದ ಆರೋಪದಲ್ಲಿ 28 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಪೋಕ್ಸೋ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಡೆಸುತ್ತಿದ್ದ ವಿಚಾರಣೆಯನ್ನು ರದ್ದುಪಡಿಸಿದ ನ್ಯಾಯಾಲಯ, ಇಂಥ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದೆ.
“ಪೋಕೋ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಬೇಕಿದ್ದರೆ, ಮಗು ಅಥವಾ ಮಕ್ಕಳನ್ನು ಅಶ್ಲೀಲ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಐಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ, ಆರೋಪಿಯು ಇಂತಹ ಚಿತ್ರಗಳನ್ನು ಪ್ರಕಟಿಸಿರಬೇಕು, ಪ್ರಸಾರ ಮಾಡಿರಬೇಕು ಅಥವಾ ಸೃಷ್ಟಿಸಿರಬೇಕು” ಎಂದು ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
“ವಾಸ್ತವವಾಗಿ ಆರೋಪ ಹೊತ್ತ ವ್ಯಕ್ತಿಯ ಕ್ರಮವು ಖಾಸಗಿಯಾಗಿದ್ದು, ಬೇರೆಯವರ ಮೇಲೆ ಪರಿಣಾಮ ಅಥವಾ ಪ್ರಭಾವ ಬೀರುವುದಿಲ್ಲ. ಈ ವ್ಯಕ್ತಿ ಇಂತಹ ಫೋಟೊ ಅಥವಾ ವಿಡಿಯೋವನ್ನು ಪ್ರಸಾರ ಮಾಡಲು ಅಥವಾ ವಿತರಿಸಲು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಲು ಆರಂಭಿಸಿದಾಗ, ಅಪರಾಧದ ಅಂಶಗಳು ಕೂಡಾ ಆರಂಭವಾಗುತ್ತವೆ” ಎಂದು ನ್ಯಾಯಮೂರ್ತಿ ವೆಂಕಟೇಶನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಮಕ್ಕಳ ಕಳ್ಳರೆಂದು ಮೂವರು ಸಾಧುಗಳನ್ನು ನಗ್ನಗೊಳಿಸಿ ಹಲ್ಲೆ ನಡೆಸಿದ ಸಾರ್ವಜನಿಕರು
“ಧೂಮಪಾನ ಮತ್ತು ಮದ್ಯಪಾನದಂತೆ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುವುದು ಕೂಡಾ ಈ ಪೀಳಿಗೆಗೆ ವ್ಯಸನವಾಗಿದೆ. ಇದಕ್ಕೆ ಶಿಕ್ಷೆ ಪರಿಹಾರವಾಗಲಾರದು. ಝಡ್ ಪೀಳಿಗೆಯ ಮಕ್ಕಳು ಈ ಗಂಭೀರ ಸಮಸ್ಯೆಯ ಬಿಗಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದಾರೆ ಹಾಗೂ ಅವರನ್ನು ತೆಗಳುವುದು ಅಥವಾ ಶಿಕ್ಷಿಸುವ ಬದಲು ಸಮಾಜ ಅವರಿಗೆ ಸೂಕ್ತ ಸಲಹೆ ನೀಡುವ ಮತ್ತು ಅವರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಬೇಕು. ಈ ವ್ಯಸನದಿಂದ ಹೊರಬರುವಂತೆ ಅವರಿಗೆ ಆಪ್ತ ಸಮಾಲೋಚನೆ ನೀಡಬೇಕು” ಎಂಬ ಅಂಶಗಳನ್ನು ನ್ಯಾಯಮೂರ್ತಿ ವೆಂಕಟೇಶನ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.