‘ಪಂಚಮ ಪದ’ : ನಿಗಿನಿಗಿ ಕೆಂಡದಂಥ ಕಥನ ಪ್ರಸ್ತುತಿ

Date:

Advertisements
ಪ್ರೇಕ್ಷಕರನ್ನು ಪ್ರಶ್ನಿಸುವ, ವಿಚಾರ ಪ್ರಚೋದನೆಗೆ ಒತ್ತಾಯಿಸುವ ಹಾಗೂ ಅಂತಿಮವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನು ಈ ‘ಪಂಚಮ ಪದ’ ಹೊಂದಿದೆ. ಯಾವುದೇ ಸರಳ ನಿಲುವಿಗೆ ಬಾರದೆ, ಸಾಮಾಜಿಕ ಅನ್ಯಾಯವನ್ನು ಕಿತ್ತುಹಾಕುವಲ್ಲಿ ಸಮಾಜದ ಪ್ರತಿಯೊಬ್ಬರೂ ಯಾವ ಪಾತ್ರವನ್ನು ವಹಿಸಬಹುದು ಎಂಬ ಪ್ರಮುಖ ಪ್ರಶ್ನೆಯನ್ನು ಎತ್ತುವಲ್ಲಿ ಈ ಪ್ರಸ್ತುತಿಯ ಯಶಸ್ಸಿದೆ.

ಕರ್ನಾಟಕದ ದಲಿತ ಚಳವಳಿಯ ಬಿಡಿಬಿಡಿ ಚಿತ್ರಗಳನ್ನು ‘ಪಂಚಮ’ ಪತ್ರಿಕೆಯ ಲೇಖನಗಳ ಓದು, ಹೋರಾಟದ ಹಾಡುಗಳ ಮೂಲಕ ಕಟ್ಟಿರುವ ಅಪರೂಪದ ಕಥನ ಪ್ರಸ್ತುತಿ ‘ಪಂಚಮ ಪದ’ ಬೆಂಗಳೂರಿನ ರಂಗಶಂಕರದಲ್ಲಿ ಬುಧವಾರ ಪ್ರದರ್ಶನ ಕಂಡಿತು.

ದಲಿತ ಚಳವಳಿ ರೂಪುಗೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ‘ಪಂಚಮ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ದಲಿತರ ಮೇಲಿನ ದೌರ್ಜನ್ಯ ಕುರಿತ ಲೇಖನಗಳು ಹಾಗೂ ಕೋಟಿಗಾನಹಳ್ಳಿ ರಾಮಯ್ಯ, ಕೆ.ಬಿ. ಸಿದ್ದಯ್ಯ, ಆರ್. ಮಾನಸಯ್ಯ, ಡಾ.ಸಿದ್ಧಲಿಂಗಯ್ಯ ಮೊದಲಾದ ದಲಿತ ಸಾಹಿತಿಗಳ ಹೋರಾಟದ ಗೀತೆಗಳನ್ನು ಬಳಸಿ ಈ ಕಥನ ಪ್ರಸ್ತುತಿಯನ್ನು ಕಟ್ಟಲಾಗಿದೆ. ಕರ್ನಾಟಕದಲ್ಲಿ ದಲಿತ ಚಳವಳಿ ಹಾಗೂ ದಲಿತ ಸಾಹಿತ್ಯ ಒಟ್ಟೊಟ್ಟಿಗೆ ಬೇರು-ಚಿಗುರುಗಳಾಗಿ ಬೆಳೆದಿರುವುದನ್ನು ಈ ರಂಗ ಪ್ರಸ್ತುತಿಯು ತೋರುತ್ತದೆ.

ಕೆ.ಪಿ. ಲಕ್ಷ್ಮಣ್ ವಿನ್ಯಾಸ ಹಾಗೂ ಕೆ. ಚಂದ್ರಶೇಖರ್‌ ನಿರ್ದೇಶನದ ಈ ಕಥನ ಪ್ರಸ್ತುತಿಯನ್ನು ‘ಜಂಗಮ ಕಲೆಕ್ಟೀವ್’ ನಿರ್ಮಿಸಿದೆ. ದಲಿತ ಕಲಾವಿದರೇ ಈ ಕಥನವನ್ನು ಪ್ರಸ್ತುತ ಪಡಿಸಿದ್ದು, ಈ ಕಲಾವಿದರ ನಿಜಬದುಕಿನ ಅನುಭವಗಳೂ ಈ ಕಥನವನ್ನು ತೀಕ್ಷ್ಣಗೊಳಿಸಿದೆ. ಉಮಾ ವೈ.ಜಿ., ನರಸಿಂಹರಾಜು ಬಿ.ಕೆ., ಶ್ರದ್ಧಾ ರಾಜ್ ಹೆಚ್‌.ಆರ್., ಶ್ವೇತಾ ಹೆಚ್‌.ಕೆ., ಮರಿಯಮ್ಮ, ಭರತ್ ಡಿಂಗ್ರಿ ಜತೆಗೆ ಕೆ.ಪಿ. ಲಕ್ಷ್ಮಣ್ ಮತ್ತು ಕೆ. ಚಂದ್ರಶೇಖರ್‌ ಕೂಡಾ ಈ ಕಥನ ಪ್ರಸ್ತುತಿಯೊಳಗೆ ಪಾತ್ರಗಳಾಗಿದ್ದಾರೆ. ದಲಿತ ಚಳವಳಿಯ ಭಾಗವೇ ಆಗಿದ್ದ ತಮಟೆಯ ಜತೆಗೆ ಅರೆ ವಾದ್ಯವೂ ಈ ಕಥನದಲ್ಲಿ ದೊಡ್ಡ ಸದ್ದು ಮಾಡುತ್ತದೆ.

Advertisements

‘ಪಂಚಮ’ ಪತ್ರಿಕೆಯಲ್ಲಿ ದಾಖಲಾದ ಕೋಲಾರದ ಹುಣಸಿಕಟ್ಟೆ, ತುಮಕೂರಿನ ದಾಸನಪುರ ಘಟನೆಗಳಿಂದ ಆರಂಭವಾಗಿ ಬಾನಂದೂರು ಕೆಂಪಯ್ಯ ಜನಿವಾರದ ಬಗ್ಗೆ ಬರೆದಿರುವ ಅನುಭವ ಲೇಖನವನ್ನು ಕಥನದಲ್ಲಿ ಮನಮುಟ್ಟುವಂತೆ ನಿರೂಪಿಸಲಾಗಿದೆ. ಕೋಟಿಗಾನಹಳ್ಳಿ ರಾಮಯ್ಯ ಅವರ ಮಗಳು ದಿಶಾ, ಲಿಂಗಸೂಕ್ಷ್ಮತೆಯ ಬಗ್ಗೆ ಹೇಳಿರುವ ಮಾತುಗಳು ಹಾಗೂ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಹೆಚ್. ಗೋವಿಂದಯ್ಯ ಅವರ ‘A Letter to Father’ ಕವಿತೆ ಈ ಕಥನದ ಭಾಗವಾಗಿವೆ.

ದಲಿತ ಹೋರಾಟದ ಕಿಚ್ಚಿಗೆ ಎಣ್ಣೆಯಾಗಿ ಬೆಳಗಿರುವುದು ಹೋರಾಟದ ಹಾಡುಗಳು ಎಂಬುದು ಇಡೀ ಕಥನದುದ್ದಕ್ಕೂ ಕಾಣುತ್ತದೆ. ತುಮಕೂರಿನ ದಾಸನಪುರದ ದಲಿತ ಚಿಕ್ಕತಿಮ್ಮಯ್ಯ ಹತ್ಯೆಯ ಹಿನ್ನೆಲೆಯಲ್ಲಿ ಕೆ.ಬಿ. ಸಿದ್ದಯ್ಯ ಕಟ್ಟಿದ, ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ…’ ಹಾಡು, ಕೋಲಾರದ ಹುಣಸಿಕಟ್ಟೆಯ ಘಟನೆಯ ಹಿನ್ನೆಲೆಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಕಟ್ಟಿದ ‘ನನ್ನ ತಂಗಿ’ ಹಾಡು, ಡಾ. ಸಿದ್ಧಲಿಂಗಯ್ಯ ಅವರ ಹೋರಾಟದ ಹಾಡುಗಳು ದಲಿತ ಚಳವಳಿಯ ಜೀವಾಳವಾಗಿದ್ದನ್ನು ಈ ಕಥನ ತೆರೆದಿಡುತ್ತದೆ.

ಇದನ್ನು ಓದಿದ್ದೀರಾ?: ನಮ್ ಜನ | ದುಡಿದರೂ ದಣಿದರೂ ನಿಸೂರಾಗದ ನಿರ್ಮಲಮ್ಮನ ಬದುಕು

ಕರ್ನಾಟಕದ ದಲಿತ ಚಳವಳಿ ಕೇವಲ ದಲಿತರ ಮೇಲಿನ ದೌರ್ಜನ್ಯಗಳಿಗಷ್ಟೇ ಸೀಮಿತವಾಗಿಲ್ಲ ಎಂಬ ಅಂಶದ ಮೇಲೆಯೂ ಈ ಕಥನ ಪ್ರಸ್ತುತಿ ಬೆಳಕು ಬೀರುತ್ತದೆ. ಕೋಲಾರದ ಹುಣಸಿಕಟ್ಟೆಯಲ್ಲಿ ಕುಂಬಾರ ಜಾತಿಯ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆ ಮಹಿಳೆ ತಂದೆಯ ಹತ್ಯೆಯ ವಿರುದ್ಧ ದನಿ ಎತ್ತಿದ್ದು ದಲಿತ ಚಳವಳಿ ಹಾಗೂ ಆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿದ್ದು ದಲಿತರು ಎಂಬುದನ್ನು ಈ ಕಥನ ತೋರುತ್ತದೆ.

ಲಘು ಹಾಸ್ಯದೊಂದಿಗೆ ಆರಂಭವಾಗುವ ಈ ಕಥನ ಮುಂದೆ ಗಂಭೀರವಾದ ಪ್ರಶ್ನೆಗಳನ್ನು ಪ್ರೇಕ್ಷಕರತ್ತ ಎಸೆಯುತ್ತಾ ಹೋಗುತ್ತದೆ. ಕೇವಲ ಪ್ರಶ್ನೆಗಳನ್ನು ಎಸೆಯುವುದು ಮಾತ್ರವಲ್ಲ, ಆ ಪ್ರಶ್ನೆಗಳಿಗೆ ಅಲ್ಲೇ ಉತ್ತರಕ್ಕಾಗಿಯೂ ಒತ್ತಾಯಿಸುತ್ತದೆ. ಒಂದು ಹಂತದಲ್ಲಿ ಪ್ರೇಕ್ಷಕರಲ್ಲಿ ಯಾರಾದರೂ ಇಂತಹ ಹಾಡು-ಅನುಭವಗಳನ್ನು ಹಂಚಿಕೊಳ್ಳುವವರಿದ್ದರೆ, ‘ನೀಲಿ ಕಾರ್ಪೆಟ್ ನಿಮಗಾಗಿ ಕಾದಿದೆ’ ಎಂದು ಆಹ್ವಾನ ನೀಡುತ್ತದೆ. ದಲಿತ ಸಂಘರ್ಷ ಸಮಿತಿಯು ನಾಡಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಸಂದರ್ಭಕ್ಕಾಗಿ ಮುದ್ರಿಸಿದ್ದ ಹ್ಯಾಂಡ್‌ಬಿಲ್‌ಗಳನ್ನು ಈ ಕಥನ ಪ್ರಸ್ತುತಿಯ ಕೊನೆಗೆ ಪ್ರೇಕ್ಷಕರ ಕಡೆಗೆ ಎಸೆಯುವ ‘ಪ್ರಯೋಗ’ ಮಾರ್ಮಿಕವಾಗಿದೆ. ಡಾ. ಸಿದ್ಧಲಿಂಗಯ್ಯ ಅವರ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ…’ ಹಾಡಿನ ಕೊನೆಯ ಸಾಲುಗಳಾದ…

‘ಮಲಗಿದವರ ಕೂಡಿಸಿದೆ ನಿಲಿಸುವವರು ಯಾರೋ
ಛಲದ ಜೊತೆಗೆ ಬಲದ ಪಾಠ ಕಲಿಸುವವರು ಯಾರೋ’
-ಎಂಬ ಸಾಲುಗಳನ್ನು,
‘ಮಲಗಿದವರ ಕೂಡಿಸಿದೆ ನಿಲಿಸುವವನು ನೀನೇ
ಛಲದ ಜೊತೆಗೆ ಬಲದ ಪಾಠ ಕಲಿಸುವವನು ನೀನೇ’
-ಎಂದು ಬದಲಿಸಿ ಹಾಡಿದ್ದು, ತಳಸಮುದಾಯಗಳ ಸಮಸ್ಯೆಗಳಿಗೆ ಈಗಲೂ ಅಂಬೇಡ್ಕರರಲ್ಲೇ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯವನ್ನು ಸೂಚಿಸುತ್ತದೆ.

ವ್ಯವಸ್ಥೆಯ ಸಮಸ್ಯೆಗಳಿಗೆ ಮುಖಾಮುಖಿಯಾಗಲು ಅಂಜದೆ, ಕಟುವಾದ ವಿಡಂಬನೆ ಮತ್ತು ತೀಕ್ಷ್ಣವಾದ ಹಾಡು-ಮಾತುಗಳಿಂದ ಈ ಪ್ರಸ್ತುತಿಯು ಗಮನ ಸೆಳೆಯುತ್ತದೆ. ‘ಪಂಚಮ ಪದ’ದ ನಿಜವಾದ ಶಕ್ತಿ ಇರುವುದು ಅದರ ಹಾಡು-ಮಾತು-ಪ್ರಶ್ನೆಗಳ ನೇಯ್ಗೆಯಲ್ಲಿ. ಪ್ರೇಕ್ಷಕರನ್ನು ಪ್ರಶ್ನಿಸುವ, ವಿಚಾರ ಪ್ರಚೋದನೆಗೆ ಒತ್ತಾಯಿಸುವ ಹಾಗೂ ಅಂತಿಮವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನು ಈ ಪ್ರಸ್ತುತಿ ಹೊಂದಿದೆ. ಯಾವುದೇ ಸರಳ ನಿಲುವಿಗೆ ಬಾರದೆ, ಸಾಮಾಜಿಕ ಅನ್ಯಾಯವನ್ನು ಕಿತ್ತುಹಾಕುವಲ್ಲಿ ಸಮಾಜದ ಪ್ರತಿಯೊಬ್ಬರೂ ಯಾವ ಪಾತ್ರವನ್ನು ವಹಿಸಬಹುದು ಎಂಬ ಪ್ರಮುಖ ಪ್ರಶ್ನೆಯನ್ನು ಎತ್ತುವಲ್ಲಿ ಈ ಪ್ರಸ್ತುತಿಯ ಯಶಸ್ಸಿದೆ.

panchama10 1

ಸ್ಟಾಂಡ್‌ಅಪ್‌ ಷೋಗಳ ಈ ಕಾಲದಲ್ಲಿ, ತಮಿಳುನಾಡಿನ ‘ಕಾಸ್ಟ್‌ಲೆಸ್ ಕಲೆಕ್ಟೀವ್’ಗಿಂತಲೂ ತೀಕ್ಷ್ಣವಾಗಿ ಈ ಕಥನ ಪ್ರಸ್ತುತಿಯನ್ನು ರೂಪಿಸಿರುವ ಹಾಗೂ ಪ್ರೇಕ್ಷಕರನ್ನು ಹಿಡಿದಿಡುವ ‘ಜಂಗಮ ಕಲೆಕ್ಟೀವ್‌’ನ ಈ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಈ ಕಥನದ ಆರಂಭದಲ್ಲಿ ಕಟ್ಟಿರುವ ಲಘ-ಹಾಸ್ಯದ ಚಿತ್ರಣಗಳನ್ನು ಕೈಬಿಟ್ಟರೆ ಈ ಪ್ರಸ್ತುತಿಯ ಪರಿಣಾಮ ಇನ್ನಷ್ಟು ತೀಕ್ಷ್ಣವಾಗಬಲ್ಲದು.

dayanand
ದಯಾನಂದ
+ posts

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ದಯಾನಂದ
ದಯಾನಂದ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X