ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿದೆ. ಇದರ ಬೆನ್ನಲ್ಲೇ, “ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಟ್ಟುಕೊಂಡು, ದಲಿತ ಅರ್ಚಕರನ್ನು ನೇಮಿಸಿ” ಎಂದು ಸಹಕಾರ ಸಚಿವ ರಾಜಣ್ಣ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿಂದು ಹೈಕಮಾಂಡ್ ನಾಯಕರ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ, ‘ರಾಮಮಂದಿರ ಲೋಕಾರ್ಪಣೆಯಾದ ಮೇಲೆ ರಾಮಮಂದಿರಕ್ಕೆ ಹೋಗುತ್ತೇವೆ’ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಬಿಜೆಪಿಗರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ, ಜಾಗೀರು ಕೊಡಲಾಗಿದೆಯಾ” ಎಂದು ಪ್ರಶ್ನಿಸಿದ್ದಾರೆ.
“ವೋಟಿಗಾಗಿ ಪದೇಪದೆ ಹಿಂದೂ ಹಿಂದೂ ಎಂದು ಬಿಜೆಪಿ ಜಪ ಮಾಡುತ್ತಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಹಿಂದೂವಾಗಿ ಸಾಯುವುದಿಲ್ಲ ಎಂದಿದ್ದೇಕೆ? ಹಿಂದೂಗಳು ತಮ್ಮ ಸ್ವಾರ್ಥಕ್ಕೆ ಎಲ್ಲ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಈ ರೀತಿ ತಿಳಿಸಿದ್ದರು. ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಡಿ, ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಿಸಲು ಹೇಳಿ. ದಲಿತರು ಹಿಂದೂಗಳಿಗೆ ಏನು ಮಾಡಿದ್ದಾರೆ” ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿದ್ದೀರಾ? ಸೋಷಿಯಲ್ ಮೀಡಿಯಾದಲ್ಲಿ ಸಿಎಂ, ಸಿಎಂ ಪತ್ನಿಯ ಅವಾಚ್ಯ ನಿಂದನೆ: ಎಫ್‌ಐಆರ್ ದಾಖಲು
ಇದೇ ವೇಳೆ, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ನಾನು, ಹೆಚ್.ಸಿ ಮಹದೇವಪ್ಪ, ಈಶ್ವರ್ ಖಂಡ್ರೆ ಸೇರಿ ಐವರು ಸಚಿವರು ಸೇರಿ ಭೇಟಿಯಾಗಿದ್ದೇವೆ. ಲೋಕಸಭಾ ಎಲೆಕ್ಷನ್ ಕುರಿತು ನಮ್ಮಲ್ಲಿ ಉತ್ಸಾಹ ಇನ್ನಷ್ಟು ಇಮ್ಮಡಿಗೊಂಡಿದ್ದು ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಬೇಕಿದೆ” ಎಂದು ಹೇಳಿದರು.