ಜ.22ರಂದು ನಡೆಸಲು ಉದ್ದೇಶಿಸಿರುವ ಅಯೋಧ್ಯೆಯ ರಾಮಲಲ್ಲಾ ಪ್ರತಿಷ್ಠಾಪನೆ ವಿಚಾರವು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದೆ. ಉತ್ತರಾಖಂಡದ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ, “ರಾಮಮಂದಿರದ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಅದರ ನಡುವೆಯೇ ಪ್ರಾಣ ಪ್ರತಿಷ್ಠಾಪನೆ ನಡೆಸುತ್ತಿರುವುದು ಶಾಸ್ತ್ರಗಳಿಗೆ ವಿರುದ್ಧ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ ಮೂರು ಪೀಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ” ಎಂದು ತಿಳಿಸಿದ್ದರು.
ಇದೇ ವಿಚಾರವಾಗಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಈ ಬಗ್ಗೆ ಮತ್ತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, “ತಪ್ಪು ಯಾರು ಮಾಡಿದರೂ ತಪ್ಪೇ. ತಪ್ಪನ್ನು ನಾವು ತಪ್ಪು ಅಂತಾನೇ ಹೇಳುತ್ತೇವೆ, ಅದರಲ್ಲಿ ಮುಲಾಜಿಲ್ಲ” ಎಂದು ತಿಳಿಸಿದ್ದಾರೆ.
“ನಾವು ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದೇವೆ. ನಮ್ಮ ವಿರೋಧ ಇರುವುದು ರಾಮಮಂದಿರದ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಅದರ ನಡುವೆಯೇ ಪ್ರಾಣ ಪ್ರತಿಷ್ಠಾಪನೆ ನಡೆಸುತ್ತಿರುವುದು ಶಾಸ್ತ್ರಗಳಿಗೆ ವಿರುದ್ಧ ಎಂಬುದು. ಇದನ್ನು ಮತ್ತೆ ಪುನರುಚ್ಛರಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
मूर्तियां तोड़ी, नालियों मे बहाये
हम विरोध करते रहेंगे : शंकराचार्य 🔥🔥🔥pic.twitter.com/uIL6YUfc0s— Kanhaiya Kumar (@BeingMR_) January 15, 2024
“ನಾವು ಪ್ರಧಾನಿ ಮೋದಿಯವರ ವಿರುದ್ಧವಲ್ಲ. ಮೋದಿಯವರು ವಿರೋಧಿಗಳು ಯಾರೆಂದರೆ ಅವರು ತಪ್ಪು ಮಾಡುತ್ತಿದ್ದಾಗಲೂ ಸುಮ್ಮನೆ ಕೂರುವವರು ನಿಜವಾದ ವಿರೋಧಿಗಳು. ಇದು ಧರ್ಮದ ವಿಚಾರ. ಧರ್ಮದ ವಿಚಾರದಲ್ಲಿ ತಪ್ಪು ನಡೆಯುತ್ತಿದೆ. ಅದನ್ನು ತಪ್ಪು ಅಂತ ಹೇಳುತ್ತಿದ್ದೇವೆ ಅಷ್ಟೇ. ತಪ್ಪನ್ನು ನಾವು ತಪ್ಪು ಅಂತಾನೇ ಹೇಳುತ್ತೇವೆ, ಅದರಲ್ಲಿ ಯಾವುದೇ ಮುಲಾಜಿಲ್ಲ” ಎಂದು ಅವಿಮುಕ್ತೇಶ್ವರಾನಂದ ಸ್ವಾಮೀಜಿ ತಿಳಿಸಿದ್ದಾರೆ.
“ಕಾರ್ಯಕ್ರಮದ ಆಹ್ವಾನವಿದೆ ಎಂದ ಮಾತ್ರ ಹೋಗುವುದು ಬೇರೆ ವಿಚಾರ. ಅಲ್ಲಿ ಉಪಸ್ಥಿತರಿದ್ದು ಶಾಸ್ತ್ರಕ್ಕೆ ವಿರುದ್ಧವಾಗಿ ನಡೆಯುವ ಒಂದು ಧಾರ್ಮಿಕ ಕಾರ್ಯಕ್ರಮವನ್ನು ನೋಡುತ್ತಾ ಕೂರುವುದು ನಮಗೆ ಸಾಧ್ಯವಿಲ್ಲ. ಹಾಗಾಗಿ, ನಮ್ಮ ಕಣ್ಣೆದುರೇ ತಪ್ಪು ನಡೆಯುತ್ತಿದ್ದಾಗ ಅದನ್ನು ನೇರವಾಗಿ ಹೇಳುವುದು ನಮ್ಮ ಕರ್ತವ್ಯ. ನಾವು ಕೂತಿರುವ ಪೀಠದ ಕೆಲಸವೇ ಅದು. ಅದನ್ನಷ್ಟೇ ನಾವು ಮಾಡುತ್ತಿದ್ದೇವೆ” ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
“ನಾವು ಮೋದಿಯವರ ವಿರೋಧಿಗಳಲ್ಲ. ಒಂದು ವೇಳೆ ಮೋದಿಯವರಿಂದ ತಪ್ಪು ಸಂಭವಿಸುತ್ತಿದೆ ಎಂದು ಗೊತ್ತಾದರೆ ಖಂಡಿತವಾಗಿಯೂ ಅದನ್ನು ನಾವು ಬಹಿರಂಗವಾಗಿ ಹೇಳಬೇಕಾಗುತ್ತದೆ. ಮೋದಿಯವರ ಮೂಲಕ ಕಾಶಿಯಲ್ಲಿ ನೂರಾರು ಮಂದಿರಗಳನ್ನು ಕೆಡವಲಾಗಿತ್ತು. ನಾವು ಬಹಳ ಗೌರವದಿಂದ ಪೂಜಿಸುತ್ತಿದ್ದ ದೇವರ ಮೂರ್ತಿಗಳನ್ನು ತುಂಡರಿಸಿ, ಕಾಲುವೆಗಳಲ್ಲಿ ಎಸೆಯಲಾಗಿತ್ತು. ಅದನ್ನು ನಮ್ಮ ಕಣ್ಣಿನಿಂದ ನೋಡಲಾಗಿಲ್ಲ. ಇಂತಹ ತಪ್ಪುಗಳನ್ನು ನಾವು ತಪ್ಪು ಅಂತಾನೇ ಹೇಳಬೇಕಾಗುತ್ತದೆ” ಎಂದು ಉತ್ತರಾಖಂಡ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಕಾಶಿ ಕಾರಿಡಾರ್ ನಿರ್ಮಾಣ ಮಾಡಲಾಗಿದೆಯಲ್ಲವೇ ಎಂದು ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, “ಹೌದು. ಕಾಶಿ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಹಾಗಂತ ಒಂದು ಒಳ್ಳೆಯ ಕೆಲಸ ಎಂದು ಸಬೂಬು ಹೇಳಿ 50 ಜನರನ್ನು ಕೊಲ್ಲಬಹುದೇ? ಒಂದು ಮೂರ್ತಿಯ ಗೌರವವನ್ನು ಹೆಚ್ಚಿಸಲು ಬೇರೆ 10 ಮೂರ್ತಿಯನ್ನು ಒಡೆದು ಹಾಕಬಹುದೇ? ಇದು ನಿಯಮವಲ್ಲ. ಎಲ್ಲ ಮೂರ್ತಿಯನ್ನು ಕೂಡ ನೀವು ಗೌರವಿಸಬೇಕಾಗುತ್ತದೆ. ಕಾಶಿಯಲ್ಲಿ ಪ್ರತಿಮೆಗಳನ್ನು ಒಡೆದು ಚರಂಡಿಗೆ ಎಸೆಯಲಾಯಿತು. ಇದು ತಪ್ಪಲ್ಲವೇ?” ಎಂದು ಶಂಕರಾಚಾರ್ಯ ಪೀಠದ ಸ್ವಾಮೀಜಿ ಕೇಳಿದರು.
ಇದನ್ನು ಓದಿದ್ದೀರಾ? ಮಂದಿರ ನಿರ್ಮಾಣ ಪೂರ್ತಿಯಾಗಿಲ್ಲ; ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರಗಳಿಗೆ ವಿರುದ್ಧ: ಅವಿಮುಕ್ತೇಶ್ವರಾನಂದ ಸ್ವಾಮೀಜಿ
“ಅಯೋಧ್ಯೆಯಲ್ಲಿ ನಡೆಯಬೇಕಾದದ್ದು ಧಾರ್ಮಿಕ ಕಾರ್ಯ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ರಾಮಮಂದಿರವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ. ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಜನರು ಇದನ್ನೇ ಪ್ರಶ್ನಿಸುತ್ತಿದ್ದಾರೆ. ಜನರ ಮಾತನ್ನೇ ನಾವು ಉದ್ಘಾಟನೆಗೆ ಸಿದ್ಧರಾದವರಲ್ಲಿ ಕೇಳುತ್ತಿದ್ದೇವೆ ಅಷ್ಟೇ. ನಮ್ಮೊಂದಿಗೆ ಯಾವ ರಾಜಕೀಯ ಪಕ್ಷದ ಮುಖಂಡರೂ ಹೇಳಿಸುತ್ತಿಲ್ಲ” ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
“ನಮ್ಮನ್ನು ಕಾಂಗ್ರೆಸ್ ಪರ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ಶಾಸ್ತ್ರ ವಿರೋಧಿ ಕಾರ್ಯವನ್ನಷ್ಟೇ ಪ್ರಶ್ನಿಸುತ್ತಿದ್ದೇವೆ. ನಾವು ಶಾಸ್ತ್ರೀಯ ಪ್ರಶ್ನೆ ಎತ್ತಿದ್ದಕ್ಕೆ ಮೊದಲು ಉತ್ತರಿಸಲಿ. ಅದಕ್ಕೆ ಉತ್ತರಿಸುವ ಬದಲು ಈ ರೀತಿಯ ಆರೋಪ ಮಾಡಲಾಗುತ್ತಿದೆ ಅಷ್ಟೇ. ರಾಮಮಂದಿರದ ಕಾರ್ಯ ಪೂರ್ಣವಾದ ಬಳಿಕಷ್ಟೇ ಪ್ರಾಣ ಪ್ರತಿಷ್ಠೆ ನಡೆಯಲಿ ಎಂಬುದು ನಮ್ಮ ಆಗ್ರಹ” ಎಂದು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.