ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಇ–ಮೇಲ್ ಐಡಿ ಸೃಷ್ಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಬಳಿ ₹9.70 ಲಕ್ಷ ಹಣ ಪಾವತಿಸುವಂತೆ ಸೈಬರ್ ವಂಚಕರು ಸಂದೇಶ ಕಳುಹಿಸಿದ್ದರು. ಸದ್ಯ ಈ ಬಗ್ಗೆ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರ ಅಬ್ದುಲ್ ಖುದ್ದೂಸ್ ಅವರು ನೀಡಿದ ದೂರಿನನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದಾರೆ.
ಜ.13ರಂದು ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಅಧಿಕೃತ ಇ–ಮೇಲ್ ವಿಳಾಸ ‘caofa@mybmtc.com’ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ಇ–ಮೇಲ್ ಬಂದಿದೆ.
RAMALINGAREDDY,ceo.care@lifeinsurancecares.in ಎಂಬ ನಕಲಿ ಇ–ಮೇಲ್ ಬಳಸಿ ಕೂಡಲೇ ಆರ್ಟಿಜಿಎಸ್ ಮೂಲಕ ₹9.70 ಲಕ್ಷ ಪಾವತಿ ಮಾಡುವಂತೆ ಸಂದೇಶ ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಲಿಂಡರ್ ಸ್ಪೋಟಗೊಂಡು ಏಳು ಜನರಿಗೆ ಗಂಭೀರ ಗಾಯ
ಈ ಬಗ್ಗೆ ಅನುಮಾನಗೊಂಡ ಅಬ್ದುಲ್ ಖುದ್ದೂಸ್ ಅವರು ನೇರವಾಗಿ ಸಚಿವರಿಗೆ ಕರೆ ಮಾಡಿ ವಿಚಾರಿಸಿದಾಗ, ಆ ರೀತಿಯ ಯಾವುದೇ ಇ–ಮೇಲ್ ಸಂದೇಶ ಕಳುಹಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಬಳಿಕ ಇದು ಸೈಬರ್ ವಂಚಕರ ಕೈಚಳಕ ಇರಬಹುದು ಎಂದು ಭಾವಿಸಿ, ಅಬ್ದುಲ್ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.