ರಾಯಚೂರು ಜಿಲ್ಲಾ ಸಿಂಧನೂರು ತಾಲೂಕು ಜವಳಗೇರ ನಾಡಗೌಡರ 4,900 ಎಕರೆ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚುವ ಬಗ್ಗೆ ಹಾಗೂ ರಾಜ್ಯಾದ್ಯಂತ ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961 ಸೆಕ್ಷನ್ 122ಕ್ಕೆ ತಿದ್ದುಪಡಿ ತಂದು ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್, ಕರ್ನಾಟಕ ರೈತ ಸಂಘ-ಎಐಕೆಕೆಎಸ್ ಸಂಘಟನೆಯಿಂದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
“ಜವಳಗೇರ ಹೆಚ್ಚವರಿ ಭೂ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ. ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿರುವ ವೆಂಕಟರಾವ್ ತಂದೆ ರಾಮರಾವ್ ನಾಡಗೌಡ ಹಾಗೂ ಇವರ ಕುಟುಂಬದ ಕೈ ವಶದಲ್ಲಿದ್ದ 4,900 ಎಕರೆ ಎ ದರ್ಜೆಯ ಭೂಮಿಯ ಪೈಕಿ ಸದರಿ 450 ಎಕರೆಯನ್ನು ಈ ಹಿಂದೆ 1980-90 ರ ಅವಧಿಯಲ್ಲಿ ಹಂಚಿಕೆ ಮಾಡಲಾಗಿದೆ. ಉಳಿದ 4,500ಕ್ಕೂ ಹೆಚ್ಚು ಎಕರೆ ಭೂಮಿಯನ್ನು ನಕಲಿ ಘೋಷಣೆದಾರರು, ನಕಲಿ ದಾಖಲಾತಿಗಳು, ಸುಳ್ಳು ಹೇಳಿಕೆಗಳು, ನಕಲಿ ವಂಶಾವಳಿ ಮುಂತಾದವುಗಳ ಮೂಲಕ ಕಾನೂನು ಬಾಹಿರವಾಗಿ ಮಾಡಿಕೊಂಡಿದ್ದಾರೆ. ಇಂದಿಗೂ ಈ ಜಮೀನ್ದಾರರ ಕುಟುಂಬ ಸಾವಿರಾರು ಎಕರೆ ಭೂಮಿಯನ್ನು ಹೊಂದಿದೆ” ಎಂದು ಕಾರ್ಯಕರ್ತರು ಆರೋಪಿಸಿದರು.
“ಜವಳಗೇರ ಗ್ರಾಮದ ಭೂ ಘೋಷಣದಾರರಾಗಿರುವ ಸಿದ್ದಲಿಂಗಮ್ಮ ಅವರ ಭೂ ಪ್ರಕರಣದ ಮೇಲೆ 1981ರಲ್ಲಿ ಸಿಂಧನೂರು ಭೂನ್ಯಾಯ ಮಂಡಳಿ ತೀರ್ಪು ಪ್ರಕಟಿಸಿ, ಸದರಿಯವರಿಗೆ 108
ಎಕರೆ ಜಮೀನು ಉಳಿಸಿ, ಉಳಿದ 1,064 ಎಕರೆ ಭೂಮಿಯನ್ನು ಹೆಚ್ಚವರಿ ಎಂದು ಘೋಷಿಸಿದೆ. ಸದರಿ ಭೂನ್ಯಾಯ ಮಂಡಳಿಯ ಆದೇಶಕ್ಕೆ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ, ನ್ಯಾಯಾಲಯವು 1980ರ ಭೂನ್ಯಾಯ ಮಂಡಳಿಯ ತೀರ್ಪನ್ನು ರದ್ದುಪಡಿಸಿ, ಸದರಿ ಪ್ರಕರಣವನ್ನು ಮರು ವಿಚಾರಣೆ ಮಾಡಲು 1984ರಲ್ಲಿ ಆದೇಶ ಮಾಡಿದೆ” ಎಂದರು.
“ನ್ಯಾಯಾಲಯ ಆದೇಶ ಮಾಡಿದರೂ ಸಿಂಧನೂರು ಭೂನ್ಯಾಯ ಮಂಡಳಿಯು ಕಳೆದ 39 ವರ್ಷಗಳಿಂದ ಈ ಪ್ರಕರಣದ ಮರು ವಿಚಾರಣೆಯನ್ನು ಮಾಡಿರುವುದಿಲ್ಲ. ಈ ಪ್ರಕರಣದ ಪ್ರತಿವಾದಿ ಸಿದ್ದಲಿಂಗಮ್ಮ ಎಂಬುವವರಿಗೆ ಯಾರೂ ವಾರಸುದಾರರು ಇಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಸೆಕ್ಷನ್ 74 ರಡಿ, ಈ ಪ್ರಕರಣಕ್ಕೆ ಸಂಬಂಧಿಸಿದ 1,064 ಎಕರೆ ಭೂಮಿಯ ಮಾರಾಟ ಅಥವಾ ವರ್ಗಾವಣೆಯನ್ನೂ ತಡೆದಿರುವುದಿಲ್ಲ” ಎಂದು ಹೇಳಿದರು.
“ಸಿಂಧನೂರು ಸರ್ವೆ ನಂಬರ್ 419 ಹಾಗೂ ಸುಲ್ತಾನಪೂರ ಸರ್ವೆ.ನಂ. 186 ಒಟ್ಟು 62 ಎಕರೆ 26 ಗುಂಟೆ ಭೂಮಿ(ಎ ಕ್ಲಾಸ್)ಕರ್ನಾಟಕ ಸರಕಾರ ಎಂದು ದಾಖಲಾಗಿದ್ದರೂ ಇದನ್ನು ವಿತರಿಸಿರುವುದಿಲ್ಲ. ಅಷ್ಟೆ ಅಲ್ಲದೆ ಸದರಿ ಭೂಮಿಯಲ್ಲಿ ಕಳೆದ 4 ತಿಂಗಳುಗಳಿಂದ 35ಕ್ಕೂ ಹೆಚ್ಚು ಭೂರಹಿತ ದಲಿತರು, ಹಿಂದುಳಿದವರು ಸಾಗುವಳಿ ಮಾಡುತ್ತಾ ಬಂದಿರುವ ಈ ಜಮೀನಿಗೆ ಸಂಬಂಧವಿಲ್ಲದ ರಾಜಶೇಖರ ನಾಡಗೌಡ ತಂದೆ ರುದ್ರಭೂಪಾಲ ಹಾಗೂ 5 ಮಂದಿ ಸಿಂಧನೂರು ತಹಶೀಲ್ದಾರ್, ಅರುಣ ದೇಸಾಯಿ ಹಾಗೂ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಇವರ ಲಿಖಿತ ವರದಿಗಳ ಸಹಾಯದಿಂದ ಸದರಿ ಭೂಮಿಯಲ್ಲಿ ಭೂರಹಿತರು ಬೆಳೆದ ಬೆಳೆಯನ್ನು ಕಟಾವ್ ಮಾಡಿರುತ್ತಾರೆ. ಸದರಿ ಭೂಮಿಯಲ್ಲಿ ಸಾಗುವಳಿಯೊಂದಿಗೆ ಧರಣಿ ನಡೆಸುತ್ತಿದ್ದ ಭೂರಹಿತರನ್ನು ಬಂಧಿಸಿ, ಅಧಿಕಾರಿಗಳು ನಾಡಗೌಡರ ಪರ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಜವಳಗೇರ ಭೂ ಪ್ರಕರಣ ಸೇರಿದಂತೆ ರಾಜ್ಯದ ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಸೆಕ್ಷನ್-122(ಎ)ಗೆ ತಿದ್ದುಪಡಿ ತರಬೇಕು. ಜವಳಗೇರ ಭೂ ಪ್ರಕರಣವನ್ನು ಶೀಘ್ರಗತಿಯಲ್ಲಿ ವಿಚಾರಣೆ ಮಾಡಿ ಮುಗಿಸಬೇಕು. ಸಿಂಧನೂರು ಸರ್ವೆ.ನಂ. 419 ಹಾಗೂ ಸುಲ್ತಾನಪೂರ ಸರ್ವೆ ನಂ. 186 ಸೇರಿದಂತೆ ಕರ್ನಾಟಕ ಸರ್ಕಾರ ಎಂದಿರುವ ಎಲ್ಲ ಹೆಚ್ಚವರಿ ಭೂಮಿಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದ ಭೂರಹಿತರಿಗೆ ವಿತರಿಸಬೇಕು. ಈ ವಿಷಯದಲ್ಲಿ ಕರ್ತವ್ಯ ಮರೆತು ಪ್ರತಿವಾದಿಗಳಿಗೆ ಸಹಕಾರ ನೀಡುತ್ತಿರುವ ತಹಶೀಲ್ದಾರ್ ಅರುಣ ದೇಸಾಯಿ ಅವರನ್ನು ಅಮಾನತುಗೊಳಿಸಬೇಕು. ಹಾಗೂ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ಅವರನ್ನೂ ಕೂಡಲೇ ವರ್ಗಾವಣೆ ಮಾಡಬೇಕು. ಈಗಾಗಲೇ ಈ ಪ್ರಕರಣದ ವಿಚಾರಣೆಗೆ ಸರಿಯಾದ ಪುರಾವೆಗಳು ಲಭ್ಯವಾಗಿವೆ” ಎಂದು ಒತ್ತಾಯಿಸಿದರು.
“ಜವಳಗೇರ ಭೂ ಪ್ರಕರಣ(17 ಘೋಷಣಾ ಪತ್ರಗಳು)ಸೇರಿದಂತೆ ರಾಜ್ಯದ ಎಲ್ಲ ಹೆಚ್ಚವರಿ ಭೂ ಪ್ರಕರಣಗಳ ಮರು ವಿಚಾರಣೆಗೆ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣೆ
ಕಾಯ್ದೆ 1961 ಸೆಕ್ಷನ್ 122(ಎ)ಗೆ ತಿದ್ದುಪಡಿ ತಂದು ದೇವರಾಜ ಅರಸು ಅವರ ಕನಸು ನನಸಾಗಿಸಬೇಕು. ಸಿಂಧನೂರು ರಾಯಚೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಭೂನ್ಯಾಯ ಮಂಡಳಿಗಳ ರಚನೆಗೆ ಸರ್ಕಾರ ಮುಂದಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ; ಅನಂತ್‌ಕುಮಾರ್ ಹೆಗಡೆ ವಿರುದ್ದ ಪ್ರತಿಭಟನೆ
“ರಾಯಚೂರು ಜಿಲ್ಲೆಯ ನಾರಾಯಣಪೂರ ಬಲದಂಡೆ ಸೇರಿದಂತೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದ ನೀರಾವರಿ ಪ್ರದೇಶದಲ್ಲಿ ಹೆಚ್ಚವರಿ ಭೂಮಿಗಳ ವಿಶೇಷ ವಿಚಾರಣೆಗೆ ಸರ್ಕಾರದ ಅಧಿಸೂಚನೆ ಹೊರಡಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂ ಗಂಗಾಧರ, ಜಿ ಅಮರೇಶ, ಅಜೀಜ್ ಜಾಗೀರದಾರ, ಹನುಮಂತಪ್ಪ ಗೋಡಿಹಾಳ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ ಇದ್ದರು.