ಹಿಂಬದಿಯಿಂದ ವೇಗವಾಗಿ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಡಿಕ್ಕಿಯಾಗಿ ಫುಡ್ ಡೆಲಿವರಿ ಬಾಯ್ ಬಲಿಯಾಗಿರುವ ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗದ ಬಸ್ ಚಾಲನೆಗೆ ಫುಡ್ ಡೆಲಿವರಿ ಬಾಯ್ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಸವರಾಜು ಮೃತ ಫುಡ್ ಡೆಲಿವರಿ ಬಾಯ್.
ಸೋಮವಾರ ತಡರಾತ್ರಿ 2 ಗಂಟೆ ವೇಳೆಗೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಈ ಅಪಘಾತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾತ್ರಿ ಡ್ಯೂಟಿಯಲ್ಲಿದ್ದ ಫುಡ್ ಡೆಲಿವರಿ ಬಾಯ್ ಬಸವರಾಜು ಅವರು, ಮೈಸೂರು ರಸ್ತೆ ಕಡೆಗೆ ಫುಡ್ ಡೆಲಿವರಿಗೆಂದು ತೆರಳುತಿದ್ದರು. ಇದೇ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಅತಿವೇಗದ ಚಾಲನೆಯಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಈ ಪರಿಣಾಮ ಬಸವರಾಜು ತಲೆ ಬಸ್ ಮುಂಭಾಗದ ಎಡಚಕ್ರಕ್ಕೆ ಸಿಲುಕಿದೆ. ಬಳಿಕ ಬಸ್ ಅವರ ತಲೆಯ ಮೇಲೆ ಹರಿದಿದ್ದು ಬಸವರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ವೇಗವಾಗಿ ಬಂದ್ ಹಿಂದಿನಿಂದ ಬೈಕ್‌ಗೆ ಗುದ್ದಿದ ಪರಿಣಾಮ ದೇಹವನ್ನು ಸುಮಾರು 20 ಮೀಟರ್ ನಷ್ಟು ದೂರಕ್ಕೆ ಎಳೆದೊಯ್ದಿತ್ತು ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೊಲೀಸರ ಸಮ್ಮುಖದಲ್ಲಿಯೇ ಕೊಲೆ ಆರೋಪಿಯ ಮನೆಗೆ ಬೆಂಕಿ
ಸದ್ಯ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.