ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಆಟೋ ಚಾಲಕನೋರ್ವ ರಿಕ್ಷಾದ ಹಿಂಬದಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಹೆಸರಿನೊಂದಿಗೆ ಗನ್ ಸ್ಟಿಕ್ಟರ್ ಅಂಟಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಪಕ್ಷದ ರಾಜ್ಯ ನಾಯಕ ರಿಯಾಝ್ ಕಡಂಬು ಎಂಬುವವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
“ಗಾಂಧಿ ಹಂತಕ ಗೋಡ್ಸೆ ಹೆಸರು ಆಟೋದಲ್ಲಿ ಹಾಕಿ, ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರ ಇದು” ರಿಯಾಝ್ ಕಡಂಬು ಆರೋಪಿಸಿದ್ದಾರೆ.
ಮಾನ್ಯ ದ.ಕ ಜಿಲ್ಲಾ @spdkpolice ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ. pic.twitter.com/97a8iW1IXQ
— Riyaz Kadambu (@MRiyaz_SDPI) January 16, 2024
“ದ.ಕ ಜಿಲ್ಲಾ ಎಸ್ಪಿ ಅವರೇ, ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೋಟೊ ಕೇಸು ದಾಖಲಿಸಿ, ಆರೋಪಿಯನ್ನು ಬಂಧಿಸಬೇಕು” ಎಂದು ತಮ್ಮ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.
ಬಂಟ್ವಾಳ ಆರ್‌ಟಿಓ(ಕೆಎ 70 5715) ನೋಂದಣಿ ಇರುವ ಆಟೋದಲ್ಲಿ ಗೋಡ್ಸೆಯ ಹೆಸರನ್ನು ಹಿಂಭಾಗದಲ್ಲಿ ಬರೆದು, ಜೊತೆಗೆ ಗನ್ ಇರುವ ಸ್ಟಿಕ್ಕರ್ ಅನ್ನು ಅಂಟಿಸಲಾಗಿದೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ರಿಯಾಝ್ ಕಡಂಬು, “ಕಳೆದ ಎರಡು ದಿನಗಳ ಹಿಂದೆ(ಜ.14) ನಾನು ಕಲ್ಲಡ್ಕ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿರಬೇಕಾದರೆ ನನಗೆ ಈ ದೃಶ್ಯ ಕಾಣಸಿಕ್ಕಿತ್ತು. ಹಾಗಾಗಿ, ಫೋಟೋ ಕ್ಲಿಕ್ಕಿಸಿಕೊಂಡೆ. ಇದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ಮಾಡಿರುವ ಅವಮಾನ. ಅವರನ್ನು ಕೊಂದವನ ಹೆಸರನ್ನು ತನ್ನ ಆಟೋದ ಹಿಂದೆ ಹಾಕಿದ್ದಲ್ಲದೇ, ಗನ್ ಇರುವ ಸ್ಟಿಕ್ಕರ್ ಕೂಡ ಅಂಟಿಸಲಾಗಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರ ಇದು. ಹಾಗಾಗಿ, ಸಂಬಂಧಪಟ್ಟ ಆಟೋ ಚಾಲಕ/ಮಾಲೀಕನ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ. ಕ್ರಮ ಕೈಗೊಂಡಿದ್ದಾರೋ, ಇಲ್ಲವೋ ಎಂದು ಮಾಹಿತಿ ಬಂದಿಲ್ಲ” ಎಂದು ತಿಳಿಸಿದರು.
ಈ ಬಗ್ಗೆ ಈ ದಿನ.ಕಾಮ್ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ಟ್ರಾಫಿಕ್ ನಿಯಮ ಹಾಗೂ ಮೋಟಾರು ಕಾಯ್ದೆ ಉಲ್ಲಂಘನೆಯ ವ್ಯಾಪ್ತಿಯಲ್ಲಿ ಇದು ಬರುವುದಿಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವಾಗಿರುವುದರಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿ” ಎಂದು ಮಾಹಿತಿ ನೀಡಿದರು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಸಂಪರ್ಕಿಸಿದಾಗ, “ಈ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿಲ್ಲ. ಆಟೋ ನಂಬರನ್ನು ಆಧರಿಸಿ, ಚಾಲಕನ ವಿವರವನ್ನು ಪತ್ತೆ ಹಚ್ಚುತ್ತೇವೆ. ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.