ಕರ್ನಾಟಕ ಶೋಷಿತ ಸಮುದಾಯಗಳ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜ.28ರಂದು ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಮಂಗಳವಾರ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ, ಸಮುದಾಯಗಳ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಎಚ್. ಕಾಂತರಾಜು ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಬೇಕು. ಸಾರ್ವಜನಿಕರ ಚರ್ಚೆಗೆ ಬಿಟ್ಟು ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು. ಇಡಬ್ಲೂಎಸ್ 10% ಮೀಸಲಾತಿ ರದ್ದುಪಡಿಸಬೇಕು. ಲೋಕಸಭಾ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪ ಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಅಲ್ಪ ಸಂಖ್ಯಾತರ ಜನಸಂಖ್ಯೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸವುದರ ಬಗ್ಗೆ ಸೇರಿದಂತೆ ಹಲವು ಹಕ್ಕೂತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ಭಾರತ ಹಲವು ವೈವಿದ್ಯತೆಯ ದೇಶ. ಸರ್ವಜನಾಂಗದ ಶಾಂತಿಯ ತೋಟ. ಆದರೆ, ಬ್ರಾಹ್ಮಣ ಶಾಹಿಯ ಕುತಂತ್ರದಿಂದಾಗಿ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ, ಶೇ.97ರಷ್ಟು ಶಾಂತಿಯ ಸಮುದಾಯಗಳು ಸಾವಿರಾರು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸಿದವು. ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ತಳ ಸಮುದಾಯದ 70ವರ್ಷಗಳಿಂದ ವಿದ್ಯೆ, ಉದ್ಯೋಗ, ಅಧಿಕಾರ, ಅಂತಸ್ತು, ಸಮಾನತೆಗಳನ್ನು ಪಡೆದು ದೇಶದ ಮೂಲ ನಿವಾಸಿಗಳು ಪ್ರಗತಿಯತ್ತ ಮುನ್ನಡೆಯುತ್ತಿದ್ದಾರೆ.
ಇದನ್ನು ಸಹಿಸಲಾಗದ ಪುರೋಹಿತ ಶಾಹಿ ವರ್ಗ ಮುಸಲ್ಮಾನರೆಂಬ ಬೆದರು ಬೊಂಬೆಯ ಭಯ ಹುಟ್ಟಿಸಿ ತಮ್ಮ ಸ್ವಾರ್ಥಕ್ಕಾಗಿ ಯುವಕರುಗಳನ್ನು ಮರಳು ಮಾಡುತ್ತಿವೆ. ಅವರ ಮಾತಿಗೆ ಮರುಳಾಗದೆ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನದ ಸಂರಕ್ಷಣೆಗಾಗಿ ಐಕ್ಯತೆಯಿಂದ ಹೋರಾಡಬೇಕಿದೆ ಎಂದ ಅವರು, ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ. ಸಾಮಾಜಿಕ ಸಮಾನತೆ ಸಾರಿದ ಕರ್ನಾಟಕ ಅಗ್ರಗಣ್ಯ ರಾಜ್ಯ ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಯಾಗಿದೆ. ಆದರೆ, ಬಲಾಡ್ಯರು ಶೋಷಿತರ ಪಾಲನ್ನು ಕಬಳಿಸುತ್ತಿರುವುದು ಶೋಚನೀಯ ಎಂದರು.
ಇಂದಿರಾಸಹಾನಿ ಕೇಸಿನಲ್ಲಿ ಸುಪ್ರಿಂಕೋರ್ಟ್ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಿಕೊಳ್ಳುವಂತೆ ರಾಜ್ಯಗಳಿಗೆ ನಿರ್ದೇಶಿಸಿದೆ. ಆ ಪ್ರಕಾರ ಎಲ್ಲಾ ರಾಜ್ಯಗಳು ಆಯೋಗ ರಚಿಸಿ ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಅಧ್ಯಯನಗಳನ್ನು ಪರಿಶೀಲಿಸಿ ಎಲ್ಲಾ ಜಾತಿಯವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂಬುದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಒತ್ತಾಯವಾಗಿದೆ ಎಂದು ಹೇಳಿದರು.