ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಮೂವರು ಮೃತ ಅಭಿಮಾನಿಗಳ ಕುಟುಂಬದವರಿಗೆ ನಟ ಯಶ್ ತಲಾ ₹5 ಲಕ್ಷ ಚೆಕ್ ನೀಡಿದ್ದಾರೆ.
ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಮೃತ ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಚೆಕ್ ನೀಡಿದ್ದಾರೆ.
ಏನಿದು ಘಟನೆ?
ಪ್ರತಿ ವರ್ಷದಂತೆ ಈ ವರ್ಷವೂ ನಟ ಯಶ್ ಅವರ ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಣೆ ಮಾಡೋದಕ್ಕೆ ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಯಶ್ ಅಭಿಮಾನಿಗಳು ತಯಾರಿ ನಡೆಸಿದ್ದರು. ಈ ವೇಳೆ, ನಟ ಯಶ್ ಅವರ ಆರು ಅಡಿ ಕಟೌಟ್ ಮಾಡಿಸಿ ಗ್ರಾಮದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕಟ್ಟಲು ಮಧ್ಯರಾತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೆಳಗೆ ಕಟೌಟ್ ಹಿಡಿದುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿ, ಅವರು ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಹಿಳೆಯ ಕೈ-ಕಾಲು ಕಟ್ಟಿಹಾಕಿ ದರೋಡೆ; ಐವರ ಬಂಧನ
ಈ ವಿಚಾರ ತಿಳಿಯುತಿದ್ದಂತೆಯೇ ನಟ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ಇನ್ನುಮುಂದೆ ಯಾರೂ ನನ್ನ ಕಟೌಟ್ ಹಾಕಬೇಡಿ ಎಂದು ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿಕೊಂಡಿದ್ದರು.