ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ

Date:

Advertisements
ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮ, ಗಾಂಧಿಯ ಆದರ್ಶ ಪುರುಷನಾಗಿದ್ದ. ಆ ರಾಮ, ಗಾಂಧಿ ಪ್ರಣೀತ ರಾಮ. ರಾಜ್ಯಾಧಿಕಾರ ತ್ಯಜಿಸಿ ಕಾಡಿಗೆ ಹೋದ ರಾಮ. ಗಾಂಧಿ ಕೊಂದ ಗೋಡ್ಸೆ, ಅಂದೇ ಆ ರಾಮನನ್ನೂ ಕೊಂದ. ಇಂದು ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ- ಆರೆಸೆಸ್ ರಾಮ, ಬಿಜೆಪಿ ರಾಮ, ಅಧಿಕಾರಕ್ಕಾಗಿ ಓಟು ಕೇಳುತ್ತಿರುವ ಮೋದಿ ರಾಮ.

ರಾಮ ಈ ಮಣ್ಣಿನ ಬಹುದೊಡ್ಡ ಸಮುದಾಯದ ಪಾಲಿಗೆ ಆದರ್ಶ ಪುರುಷ. ಆತನಿಗಾಗಿ ಒಂದಲ್ಲ, ಸಾವಿರ ಮಂದಿರ ಕಟ್ಟಿದರೂ ಅದಕ್ಕೆ ಯಾರಿಂದಲೂ ಅಡ್ಡಿಯಿಲ್ಲ. ಆದರೆ, ಪುರಾಣ ಕಾಲದಿಂದಲೂ ನಾವು ಕಂಡ- ರಾಜ ರಾಮ, ಸೀತಾ ರಾಮ, ಸರಳ ರಾಮ, ಆದರ್ಶ ರಾಮ, ಗಾಂಧಿಯ ರಾಮ- ಈಗ ಸಂಘ ಪರಿವಾರದ ರಾಮ, ಬಿಜೆಪಿಯ ರಾಮ, ಮೋದಿಯ ರಾಮನಾಗಿ ಪರಿವರ್ತನೆ ಹೊಂದಿದ್ದಾನೆ. ಅವರ ಭವಿಷ್ಯಕ್ಕಾಗಿ ಮತಭಿಕ್ಷೆ ಬೇಡುತ್ತಿದ್ದಾನೆ.

ಶ್ರೀರಾಮನ ಜನ್ಮಸ್ಥಾನವೆಂದು ನಂಬಲಾದ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ದಿನ ಹತ್ತಿರವಾದಂತೆಲ್ಲ, ಮಂತ್ರಾಕ್ಷತೆ ವಿತರಣೆ ವಿಪರೀತಕ್ಕೋಗುತ್ತಿದೆ. ದೇಶದ ಜನ ದೇವರು ಮತ್ತು ಧರ್ಮದ ಅಮಲಿನಲ್ಲಿ ತೇಲಾಡತೊಡಗಿದ್ದಾರೆ. ಸಾಮಾಜಿಕ ಬದುಕಿನ ಆಂತರಿಕ ತೊಳಲಾಟಗಳು ಬಹಿರಂಗಕ್ಕೆ ಬಂದು ಸಂಭ್ರಮಕ್ಕಿಂತ ಸಂಘರ್ಷವೇ ವಿಜೃಂಭಿಸುವಂತಾಗಿದೆ. ಆ ಸಂಘರ್ಷದಲ್ಲಿ ರಾಜಕಾರಣ ಮೇಲುಗೈ ಸಾಧಿಸತೊಡಗಿದೆ.

ಇದಕ್ಕೆ ಪೂರಕವಾಗಿ ಮೊನ್ನೆ ಕರಾವಳಿಯಲ್ಲಿ ನಡೆದ ಘಟನೆಯೊಂದನ್ನು ನೋಡಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರಿನ ಸಂಘ ಪರಿವಾರದ ಕಾರ್ಯಕರ್ತ ಸಂತೋಷ್, ಮನೆಮನೆಗೆ ಮಂತ್ರಾಕ್ಷತೆ ವಿತರಿಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರುಣ್ ಕುಮಾರ್ ಪುತ್ತಿಲ ಪರಿವಾರದವರು, ಒಂದು ಹೆಜ್ಜೆ ಮುಂದೆ ಹೋಗಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಮಂಜುನಾಥನ ಅಮ್ಮನಿಗೂ ಹಿಡಿದು ಬಡಿದಿದ್ದಾರೆ.

Advertisements

ಹಲ್ಲೆಗೊಳಗಾದ ಮಂಜುನಾಥ್ ಹಿಂದೂ ಸಂಘಟನೆಯ ಕಾರ್ಯಕರ್ತ. ಈತನ ಮೇಲೆ ಹಲ್ಲೆ ಮಾಡಿದವರು ಪುತ್ತಿಲ ಪರಿವಾರದವರು- ಅವರೂ ಹಿಂದೂಗಳೇ. ಇದು ಹಿಂದೂಗಳ ವಿರುದ್ಧ ಹಿಂದೂಗಳೇ ನಡೆಸಿರುವ ಕೃತ್ಯ. ರಾಜಕೀಯ ಅಸ್ತಿತ್ವಕ್ಕಾಗಿ ಗೆದ್ದವರು-ಸೋತವರ ನಡುವೆ ನಡೆದ ಬಡಿದಾಟ. ಈ ಘಟನೆಗೆ ಶ್ರೀರಾಮನ ಮಂತ್ರಾಕ್ಷತೆ ವಿತರಣೆ ಒಂದು ನೆಪ. ಇದರ ಹಿಂದೆ ರಾಜಕಾರಣವಿದೆ, ಶ್ರೀರಾಮನ ಪ್ರತಿಷ್ಠಾಪನೆ ಎಂಬ ಸಂಭ್ರಮ ಸಂಘರ್ಷವನ್ನು ಸೃಷ್ಟಿಸುತ್ತಿದೆ. ಅದೇ ವಿಜೃಂಭಿಸುತ್ತಿದೆ.

ಈ ಘಟನೆ ಮೋದಿ ಪ್ರಣೀತ ಮಾಧ್ಯಮಗಳಿಗೆ ಧರ್ಮಸಂಕಟ ತಂದೊಡ್ಡಿದೆ. ಘಟನೆಯ ಪರ-ವಿರೋಧ, ಯಾವ ನಿಲುವು ತಾಳಿದರೂ, ಅದು ಹಿಂದೂ ವಿರೋಧಿಯಾಗುವುದಿಲ್ಲ. ಅಗಿದು ಜಗಿಯುವ ರಸಗವಳವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಸರಕಾಗುವುದಿಲ್ಲ. ಲಾಭ ತಂದುಕೊಡುವುದಿಲ್ಲ.

ಅಕಸ್ಮಾತ್ ಇಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ? ಅದನ್ನು ನಮ್ಮ ಮೋದಿ ಪ್ರಣೀತ ಮಾಧ್ಯಮಗಳು ನೋಡುವ ಬಗೆಯೇ ಬೇರೆಯಾಗುತ್ತಿತ್ತು. ಭಾರತ-ಪಾಕಿಸ್ತಾನ, ಹಿಂದೂ-ಮುಸ್ಲಿಂ ಮುನ್ನೆಲೆಗೆ ಬರುತ್ತಿತ್ತು. ಟಿವಿ ಚಾನೆಲ್‌ಗಳು ಚರ್ಚೆಯ ಹೆಸರಲ್ಲಿ ಗಡ್ಡ, ಟೋಪಿ, ಪೈಜಾಮ ಧರಿಸಿದ ಮುಸ್ಲಿಮರನ್ನು ಕೂರಿಸಿ, ಪ್ರಚೋದನೆಗೆ ಒಳಪಡಿಸಿ ರಾಮಮಂದಿರಕ್ಕೋ ಅಥವಾ ರಾಮನಿಗೋ ಅಪಚಾರವಾಗುವ ರೀತಿಯ ಹೇಳಿಕೆಗಳನ್ನು ಪಡೆದು ಮುಸ್ಲಿಂ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಲಾಗುತ್ತಿತ್ತು. ಅದು ಕರಾವಳಿಗೆ ಬೆಂಕಿ ಹಚ್ಚುತ್ತಿತ್ತು. ಅದಕ್ಕೆ ತುಪ್ಪ ಸುರಿದರೆ ಕೋಮುಗಲಭೆಗೆ ಕಾರಣವಾಗುತ್ತಿತ್ತು. ಅದರಿಂದ ಹುಲುಸಾದ ರಾಜಕೀಯ ಬೆಳೆ ತೆಗೆಯಬಹುದಾಗಿತ್ತು. ಆದರೆ, ಅದಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಮುಸ್ಲಿಂ ಸಮುದಾಯ ಈಗಿಂದೀಗಲೇ ಜಾಗೃತಿ ವಹಿಸಬೇಕು. ಮುಸ್ಲಿಮರನ್ನು ಖೆಡ್ಡಾಕ್ಕೆ ಬೀಳಿಸಿ ಮಜಾ ನೋಡುವ ಮಾಧ್ಯಮಗಳ ತಂತ್ರಗಳಿಗೆ ಬಲಿ ಬೀಳದಂತೆ ಎಚ್ಚರ ವಹಿಸಬೇಕು.

ಏಕೆಂದರೆ, ಈಗಾಗಲೇ ದೇಶದ ಸುದ್ದಿ ಮಾಧ್ಯಮಗಳಲ್ಲಿ ಶ್ರೀರಾಮ ಭಜನೆ ಶುರುವಾಗಿದೆ. ಮೋದಿ ಮಂತ್ರಾಕ್ಷತೆ ಚಾಲ್ತಿಗೆ ಬಂದಿದೆ. ಭಕ್ತಿರಸ ಹರಿಯುತ್ತಿದೆ. ದೇಶದ ಅಷ್ಟೂ ಭಾಷೆಗಳ ದಿನಪತ್ರಿಕೆಗಳಲ್ಲಿ ಪ್ರತಿದಿನ ಪೂರ್ಣ ಪುಟಗಳ ವರ್ಣರಂಜಿತ ಜಾಹೀರಾತುಗಳು ಪ್ರಕಟಗೊಳ್ಳತೊಡಗಿವೆ. ಆ ಜಾಹೀರಾತುಗಳು ದೇಶದ ಅಭಿವೃದ್ಧಿಯನ್ನು ಬಣ್ಣಿಸುತ್ತಿಲ್ಲ, ಅವು ಹೊಸ ಯೋಜನೆಗಳು – ಕಾರ್ಯಕ್ರಮಗಳನ್ನು ಹೇಳುತ್ತಿಲ್ಲ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತಿಲ್ಲ, ಬಡವರ ಹೊಟ್ಟೆ ತುಂಬಿಸುತ್ತಿಲ್ಲ. ಅದರಿಂದ ದೇಶದ ಜನತೆಗೆ ನಯಾಪೈಸೆಯ ಪ್ರಯೋಜನವೂ ಇಲ್ಲ. ಆದರೆ ದೇಶದ ಜನತೆಯ ತೆರಿಗೆ ಹಣ, ಬೆವರಿನ ಹಣ ಜಾಹೀರಾತಿನ ರೂಪದಲ್ಲಿ ನೀರಿನಂತೆ ಹರಿಯುತ್ತಿದೆ. ಅದೆಷ್ಟು ಕೋಟಿ ರೂಪಾಯಿಗಳು ಎಂಬುದನ್ನು ಆ ಶ್ರೀರಾಮನೇ ಬಲ್ಲ!

ಇನ್ನು ದೇಶದ ದೃಶ್ಯ ಮಾಧ್ಯಮವಂತೂ ಮೋದಿಮಯವಾಗಿದೆ. ಸುದ್ದಿ ಸಂಸ್ಥೆಗಳು ರಾಮಮಂದಿರಗಳಾಗಿ, ನ್ಯೂಸ್ ಚಾನೆಲ್‌ಗಳು ಭಕ್ತಿ ಚಾನೆಲ್‌ಗಳಾಗಿ, ನ್ಯೂಸ್ ಆಂಕರ್‍‌ಗಳು ಹರಿಕಥೆ ದಾಸರಾಗಿ, ದಿನದ ಇಪ್ಪತ್ನಾಲ್ಕು ಗಂಟೆಯೂ ಶ್ರೀರಾಮ ಭಜನೆಯಲ್ಲಿ ನಿರತವಾಗಿವೆ. ರಾಮನ ಮಂತ್ರಾಕ್ಷತೆ ಮೋದಿ ಮಂತ್ರಾಕ್ಷತೆಯಾಗಿ ಪರಿವರ್ತನೆಗೊಂಡಿದೆ.

ಸುಳ್ಳು ಹೇಳುವುದನ್ನು ಮತ್ತು ಹರಡುವುದನ್ನು ಧರ್ಮಗಳು ಅಪರಾಧವೆಂದು ಪರಿಗಣಿಸುತ್ತವೆ. ಆದರೆ, ಮೋದಿ ಭಜನೆಯಲ್ಲಿ ನಿರತರಾಗಿರುವ ಸುದ್ದಿ ಮಾಧ್ಯಮಗಳು ರಾಮನ ಜಾಗದಲ್ಲಿ ಮೋದಿಯನ್ನು ಕೂರಿಸಿ, ಧರ್ಮದ ಮರೆಯಲ್ಲಿ ಮೋದಿಯನ್ನು ಮೆರೆಸುತ್ತಿವೆ.

ಮೋದಿಯ ಹತ್ತು ವರ್ಷಗಳ ಹದಗೆಟ್ಟ ಆಡಳಿತದಿಂದ ದೇಶ ಅಧೋಗತಿಗಿಳಿದಿದ್ದನ್ನು, ಮೋದಿಯ ಮೌನದಿಂದಾದ ಅನಾಹುತವನ್ನು ಹೇಳದೆ ಮೋಸ ಮಾಡುತ್ತಿವೆ. ಪ್ರಶ್ನಿಸುವುದನ್ನು ದೇಶದ್ರೋಹವೆಂದು ಸಾರುತ್ತ ಸುಳ್ಳುಗಳನ್ನು ಸೃಷ್ಟಿಸುತ್ತಿವೆ. ದೇಶದಾದ್ಯಂತ ಬಿತ್ತುತ್ತಿವೆ. ಧರ್ಮರಕ್ಷಣೆಯ ಭ್ರಮೆಯಲ್ಲಿರುವ ಭಕ್ತರು ಅದನ್ನೇ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಇಡೀ ದೇಶವೇ ಸುಳ್ಳಿನ ಭ್ರಮಾಲೋಕದಲ್ಲಿ ಮುಳುಗೇಳುತ್ತಿದೆ.

ಅಸಲಿಗೆ, ಯಾರೂ ಶ್ರೀರಾಮನ ವಿರೋಧಿಗಳಲ್ಲ. ಶ್ರೀರಾಮನನ್ನು ವಿರೋಧಿಸುವುದಕ್ಕೆ ಕಾರಣಗಳೇ ಇಲ್ಲ. ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮ, ಗಾಂಧಿಯ ಆದರ್ಶ ಪುರುಷನಾಗಿದ್ದ. ಆ ರಾಮ, ಗಾಂಧಿ ಪ್ರಣೀತ ರಾಮ. ರಾಜ್ಯಾಧಿಕಾರ ತ್ಯಜಿಸಿ ಕಾಡಿಗೆ ಹೋದ ರಾಮ. ಗಾಂಧಿ ಕೊಂದ ಗೋಡ್ಸೆ, ಅಂದೇ ನಮ್ಮ ರಾಮನನ್ನೂ ಕೊಂದ. ಇಂದು ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ- ಆರೆಸೆಸ್ ರಾಮ, ಬಿಜೆಪಿ ರಾಮ, ಅಧಿಕಾರಕ್ಕಾಗಿ ಓಟು ಕೇಳುತ್ತಿರುವ ಮೋದಿ ರಾಮ.

ಗಾಂಧಿ ರಾಮನಿಗೂ, ಮೋದಿ ರಾಮನಿಗೂ ಇರುವ ವ್ಯತ್ಯಾಸವನ್ನು; ರಾಮ ರಾಜಕಾರಣಕ್ಕೆ ಬಳಕೆಯಾಗುತ್ತಿರುವ ಬಗೆಯನ್ನು ದೇಶದ ಜನತೆ ಅರಿಯುವುದು, ಇವತ್ತಿನ ಅಗತ್ಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X