ಹಿಟ್ ಆ್ಯಂಡ್ ರನ್ ಪ್ರಕರಣಗಳ ಕುರಿತ ಕಾನೂನಿನಲ್ಲಿ ಕೆಲ ನ್ಯೂನ್ಯತೆಗಳಿದ್ದು, ಅವುಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕನ್ನಡ ರಕ್ಷಣಾ ವೇದಿಕೆ ಬೆಂಬಲ ನೀಡಿದೆ. ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
“ಹಿಟ್-ಆ್ಯಂಡ್-ರನ್ ಘಟನೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಪರಿಚಯಿಸುವ ಉದ್ದೇಶ ಸೌಮ್ಯವಾಗಿದ್ದರೂ, ತುರ್ತು ಮರುಪರಿಶೀಲನೆಯ ಅಗತ್ಯವಿದೆ. ಪ್ರಸ್ತಾಪಿತ ಕಾನೂನಿನಲ್ಲಿ ಗಮನಾರ್ಹವಾದ ಲೋಪಗಳಿವೆ. ಸಾರಿಗೆ ವಲಯ ಮತ್ತು ಟ್ರಕ್ ಚಾಲಕರು ರಾಷ್ಟ್ರದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಾರೆ. ಸಾರಿಗೆ ವಲಯದ ಪ್ರತಿನಿಧಿಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಈ ಕಾಯ್ದೆ ಪರಿಚಯಿಸಿರುವುದು ಆಕ್ಷೇಪಾರ್ಹ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
“ಪ್ರಸ್ತುತ ಸಾರಿಗೆ ಉದ್ಯಮ ಚಾಲಕರ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ, ಹಿಟ್-ಆ್ಯಂಡ್-ರನ್ ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಾದ ನಿಬಂಧನೆಗಳು ಚಾಲಕರ ವೃತ್ತಿಗೆ ಪ್ರವೇಶಿಸುವ, ಮುಂದುವರೆಯುವ ಚಾಲಕರನ್ನು ನಿರುತ್ಸಾಹಗೊಳಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಚಾಲಕರ ಕೊರತೆಯನ್ನು ಉಲ್ಬಣಗೊಳಿಸಬಹುದು. ದೇಶದ ಪೂರೈಕೆ ಸರಪಳಿಯಲ್ಲಿ ಅಡಚಣೆಗಳಿಗೆ ಕಾರಣವಾಗಬಹುದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಅಪಘಾತ ತನಿಖಾ ಪ್ರೋಟೋಕಾಲ್‌ನ ಸಂಪೂರ್ಣ ಕೊರತೆಯಿದೆ. ಪ್ರಸ್ತಾವಿತ ಕಾನೂನು ಹಿಟ್ -ಅಂಡ್-ರನ್ ಪ್ರಕರಣಗಳಿಗೆ ಸಮಗ್ರ ತನಿಖಾ ಪ್ರೋಟೋಕಾಲ್ ಅನ್ನು ರೂಪಿಸುವುದಿಲ್ಲ. ಅಪರಾಧವನ್ನು ನಿರ್ಧರಿಸುವಲ್ಲಿ ಸ್ಪಷ್ಟತೆಯ ಅಗತ್ಯವಿದೆ. ವಿಶೇಷವಾಗಿ ವಾಹನವು ಹಿಂದಿನಿಂದ ಹೊಡೆದಾಗ ಸಣ್ಣ ವಾಹನದ ಚಾಲಕನ ದೋಷದ ಕುರಿತು ತನಿಖೆಯಾಗದೆ ಕೆಲವು ವಾಹನಗಳ ಮೇಲೆ ಅನ್ಯಾಯದ ಆರೋಪಗಳು ಮೇಲುಗೈ ಸಾಧಿಸಬಹುದು. ಇದರಿಂದ ಚಾಲಕರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಕಾಯ್ದೆಯಲ್ಲಿ ನ್ಯೂನ್ಯತೆಗಳಿದ್ದು ಸರಿಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಶಫಿ, ಉಪಾಧ್ಯಕ್ಷ ಸಲೀಂ ಪಾಷಾ,ಜೈರಕವೇ ರಾಜ್ಯಾಧ್ಯಕ್ಷ ಶರಣಪ್ಪ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಚಿನ್ನಯ್ಯಸ್ವಾಮಿ, ಮುಖಂಡರುಗಳಾ ಬಸವರಾಜ ಮನ್ಸಲಾಪೂರ, ವಿಠಲ್, ಗೌಸ್, ಅಮರೇಶ, ರಾಕೇಶ, ವಿಷ್ಣು, ಖಾಜಾ ಹುಸೇನ್, ರಹೀಮ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ