ಕಾಮಗಾರಿಗಳು ನಿರ್ವಹಿಸದೆ ಸುಳ್ಳು ಬಿಲ್ ಸೃಷ್ಟಿಸಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆ ಜಿಲ್ಲೆಯ ಔರಾದ(ಬಿ) ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಿರಿಯ ಅಭಿಯಂತರು ಹಾಗೂ ಕೌಠಾ(ಬಿ) ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಆದೇಶಿಸಿದ್ದಾರೆ.
ಕೌಠಾ(ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭುದಾಸ ಜಾಧವ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಿವರಾಜ ಪಾಟೀಲ್ ಅಮಾನತುಗೊಂಡವರು. ಇಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ನಿರ್ದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಮರು ಜಾರಿಗೆ ಆಗ್ರಹ
ಕರ್ನಾಟಕ ಗ್ರಾಮ ಸ್ವರಾಜ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಪಿ.ಡಿ.ಒ.ಗಳಿಗೆ ಪಂಚಾಯತ್ ಆದಾಯದಲ್ಲಿ ಚುನಾವಣಾ ಖರ್ಚಿಗೆ ಅವಕಾಶವಿಲ್ಲ, ಆದರೆ ಕೌಠಾ(ಬಿ) ಗ್ರಾ.ಪಂ. ಪಿ.ಡಿ.ಒ. ಅವರು 26 ಸಾವಿರ ರೂ. ಖರ್ಚು ಮಾಡಿದ್ದಾರೆ ಹಾಗೂ ಪಂಚಾಯಿತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸದೆ ಸರಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತಾದ ಕಾರಣ ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.