ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಟ್ರಾಫಿಕ್ ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ನಮ್ಮ ಮೆಟ್ರೋ ಬಹುಮುಖ್ಯವಾದ ಪಾತ್ರವಹಿಸಿದೆ. ಇದೀಗ, ಮೂರನೇ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಿದೆ.
2020ರಲ್ಲೇ ಈ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು 37 ಕಿ.ಮೀ ಉದ್ದದ ಮೆಟ್ರೋ ವಿಸ್ತರಣೆ ಯೋಜನೆಗೆ ಹಾಗೂ ಈ ಮಾರ್ಗ ನಿರ್ಮಾಣಕ್ಕಾಗಿ 115 ಎಕರೆ ಭೂಸ್ವಾಧೀನ ಸೇರಿದಂತೆ ₹16,543 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಒಟ್ಟು 28 ಕಡೆಗಳಲ್ಲಿ ನಿಲ್ದಾಣಗಳು ಇರಲಿರುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವೃತ್ತಿಪರರಿಗೆ ಅನುಕೂಲವಾಗಲಿದೆ. ಬಸವೇಶ್ವರ ವೃತ್ತ, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ಪಶು ವೈದ್ಯಕೀಯ ಕಾಲೇಜು, ಗಂಗಾನಗರ ಮತ್ತು ಹೆಬ್ಬಾಳದಲ್ಲಿ ಏಳು ನಿಲ್ದಾಣಗಳು ತಲೆಎತ್ತಲಿವೆ ಎಂದು ತಿಳಿದುಬಂದಿದೆ.
ಈ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪನಿಗೆ ಬಿಎಂಆರ್‌ಸಿಎಲ್ ವಹಿಸಿತ್ತು ಎಂದು ತಿಳಿದುಬಂದಿದೆ. ಡಿಪಿಆರ್ ಕರಡು ಪ್ರಕಾರ, ಸರ್ಜಾಪುರದ ಐಟಿ ಕಾರಿಡಾರ್ ಬಳಿಯಿಂದ ಜಕ್ಕಸಂದ್ರವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ. ಕೋರಮಂಗಲದಲ್ಲಿ ಭೂಗತ ಮಾರ್ಗವಾಗಿ ಪರಿವರ್ತನೆಗೊಳ್ಳಲಿದೆ. ಅಲ್ಲಿಂದ ಸುರಂಗದ ಮೂಲಕ ನಗರದಲ್ಲಿ ಹಾದು ಹೋಗಲಿದೆ. ಬಳ್ಳಾರಿ ಮಾರ್ಗದಲ್ಲಿ ಗಂಗಾನಗರದಿಂದ ಹೆಬ್ಬಾಳದವರೆಗೆ ಮತ್ತೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ.
ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದು ಹೋಗಲಿದೆ. ಈ ಮೆಟ್ರೋ ರೈಲಿನಿಂದಾಗಿ ಬಸವೇಶ್ವರ ವೃತ್ತ ಹಾಗೂ ಹೆಬ್ಬಾಳ ನಡುವೆ ವಾಹನ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ.
ಈ ಹೊಸ ಮಾರ್ಗದ ವಿಶೇಷವೆಂದರೆ ನೀಲಿ, ಗುಲಾಬಿ, ನೇರಳೆ ಮತ್ತು 3 ನೇ ಹಂತದ ಮಾರ್ಗವು ಪರಸ್ಪರ ಸಂಪರ್ಕ ಕಲ್ಪಿಸಲಿದೆ.
ಇಬ್ಬಲೂರು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಪ್ರಾರಂಭವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೀಲಿ ಮಾರ್ಗವಾಗಿ ಗುಲಾಬಿ ಮಾರ್ಗದ ಡೇರಿ ಸರ್ಕಲ್‌ಗೆ ಸಂಪರ್ಕಿಸಲಿದೆ. ಇದರಿಂದ ಬನ್ನೇರುಘಟ್ಟ ರಸ್ತೆ ಅಥವಾ ಎಂಜಿ ರಸ್ತೆ ಕಡೆಗೆ ಪ್ರಯಾಣಿಸುವವರಿಗೆ ಸಹಾಯವಾಗುತ್ತದೆ. ಹಾಗೆಯೇ, ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಸುಲಭವಾಗಲಿದೆ.
ಈ ಸುದ್ದಿ ಓದಿದ್ದೀರಾ? ನೈರುತ್ಯ ರೈಲ್ವೆ | ಟಿಕೆಟ್ ರಹಿತ ಪ್ರಯಾಣದ 6,27,014 ಪ್ರಕರಣ ದಾಖಲು: ₹46.31 ಕೋಟಿ ದಂಡ ಸಂಗ್ರಹ
ಚಲ್ಲಘಟ್ಟ–ವೈಟ್‌ಫೀಲ್ಡ್ ನಡುವಿನ ನೇರಳೆ ಮಾರ್ಗವನ್ನು ಕೆ.ಆರ್. ಸರ್ಕಲ್ ಬಳಿ (ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣ) ಸಂಪರ್ಕಿಸಲಿದೆ. ಹೆಬ್ಬಾಳದ ಬಳಿ ಇದು ನೀಲಿ ಮಾರ್ಗ ಮತ್ತು ಹಂತ 3 ಎ (ಕೆಂಪಾಪುರದಿಂದ ಜೆಪಿ ನಗರ) ಮತ್ತು ಉಪನಗರ ರೈಲು ನಿಲ್ದಾಣಕ್ಕೆ (ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ) ಸಂಪರ್ಕ ಕಲ್ಪಿಸುತ್ತದೆ. ಈ ರೀತಿ ನಗರದ ಬಹುತೇಕ ಸಂಪರ್ಕ ಜಾಲಗಳೊಂದಿಗೆ ಕೊಂಡಿಯಾಗುವ ವಿಶಿಷ್ಟ ಯೋಜನೆ ಇದಾಗಿದ್ದು, ನಗರದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸದ್ಯ, ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.