ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸರಣಿ ಸ್ಫೋಟ ನಡೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ನಡೆದ ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾರ್ವೈ ಪ್ರದೇಶದ ಎಂಐಡಿಸಿ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ 4.30ರ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವು ರಾಸಾಯನಿಕಗಳನ್ನು ತುಂಬಿದ ಡ್ರಮ್‌ಗಳು ಸ್ಫೋಟಗೊಂಡು, ಡ್ರಮ್‌ಗಳಲ್ಲಿದ್ದ ರಾಸಾಯನಿಕ ಕಾರ್ಖಾನೆಯ ಹೊರಗಿದ್ದ ಟೆಂಪೋಗಳು ಮತ್ತು ವಾಹನಗಳ ಮೇಲೆ ಬಿದ್ದಿವೆ. ಇದರಿಂದಾಗಿ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಕುಲಗಾಂವ್-ಬದ್ಲಾಪುರ್ ಅಗ್ನಿಶಾಮಕ ಘಟಕದ ಮುಖ್ಯ ಅಗ್ನಿಶಾಮಕ ಅಧಿಕಾರಿ ಭಾಗವತ್ ಸೋನಾವಾನೆ ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಬರನಾಥ್, ಬದ್ಲಾಪುರ ಮತ್ತು ಉಲ್ಲಾಸನಗರದಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅಕ್ಕಪಕ್ಕದ ಎರಡು ಘಟಕಗಳಿಗೆ ವ್ಯಾಪಿಸಿದ ಬೆಂಕಿಯನ್ನು ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ನಂದಿಸಲಾಗಿದೆ ಎಂದು ಸೋನಾವಾನೆ ತಿಳಿಸಿದ್ದಾರೆ.
ಮೃತ ಕಾರ್ಮಿಕ ಯಾರು ಎಂಬುದನ್ನು ಇನ್ನೂ ಗುರುತಿಸಲಾಗಿಲ್ಲ. ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.