ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಪಿಎಗಳು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಹೀಗಾದ್ರೆ ನಾವು ಹೇಗೆ ಮಾಡಬೇಕು? ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಕುಂಠಿತಗೊಂಡಿವೆ ಎಂದು ಬಿಜೆಪಿ ಕಾರ್ಯಕರ್ತರು ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಸಭೆಯಲ್ಲಿ ಅನಂತಕುಮಾರ್ ಹೆಗಡೆಗೆ ಕ್ಲಾಸ್ ತೆಗೆದುಕೊಂಡ ಕಾರ್ಯಕರ್ತರು ಖಾನಾಪುರದಲ್ಲಿ ಸಂಸದರ ಕಾರ್ಯಾಲಯ ಓಪನ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನೇ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರು, “ಖಾನಾಪುರ ತಾಲೂಕಿನ ಜನ ಬೆಳಗಾವಿಗೆ ಹೋದರೆ, ಕಾರವಾರಕ್ಕೆ ಹೋಗಿ ಅಂತಾರೆ. ಕಾರವಾರಕ್ಕೆ ಹೋದರೆ ನೀವು ಬೆಳಗಾವಿ ಜಿಲ್ಲೆಯವರು ಅಲ್ಲಿಗೆ ಹೋಗಿ ಅಂತಾರೆ. ಖಾನಾಪುರ ತಾಲೂಕಿನ ಜನ ನಡುವಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಆರು ಬಾರಿ ಸಂಸದರಾಗಿದ್ದೀರಿ ಖಾನಾಪುರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುವೂ ಜಾರಿಯಾಗಿಲ್ಲ, ಜನರಿಗೆ ತಲುಪಿಲ್ಲ” ಎಂದು ಬೇಸರ ವ್ಯಕ್ತಪಡಸಿದರು.
“ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಅನಂತಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ
ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಬೇಕು
”ಚುನಾವಣೆ ಬಗ್ಗೆ ಮುಂದೆ ಏನಾಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಸ್ಪರ್ಧಿಸ್ತೇನೆ ಅಂತಾ ಬಂದಿಲ್ಲ, ಬಿಜೆಪಿ ಗೆಲ್ಲಿಸಿ ಅಂತಾ ಹೇಳಲು ಬಂದಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ. ಖಾನಾಪುರದಲ್ಲಿ ಸಂಸದರ ಕಚೇರಿ ತೆರೆಯಲು ಯೋಚನೆ ಮಾಡಿದ್ದೇವೆ” ಎಂದರು.
ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಅವರನ್ನು
”ಮೋದಿಯನ್ನು ಮತ್ತೆ ಗೆಲ್ಲಿಸಬೇಕೆಂಬುದು ದೇವರ ನಿರ್ಣಯವಾಗಿದೆ. ಅಡ್ವಾಣಿ, ವಾಜಪೇಯಿ ರಾಮ ಮಂದಿರಕ್ಕಾಗಿ ಯಾತ್ರೆ ಮಾಡಿದ್ರು. ಅಂದು ಯಾತ್ರೆಯಲ್ಲಿ ಕೋಟ್ಯಂತರ ಜನ ಭಾಗಿಯಾಗಿದ್ದರು. ಆದರೆ ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಕೈಯಲ್ಲಿ ಪ್ರತಿಷ್ಠಾಪಿಸಲು. ಇದು ದೇವರ ನಿರ್ಣಯ. ಮೋದಿಯನ್ನು ಮತ್ತೆ ಗೆಲ್ಲಿಸಬೇಕು ಇದು ಕೂಡ ದೇವರ ನಿರ್ಣಯ. ಕಳೆದ ಎಂಪಿ ಚುನಾವಣೆಯಲ್ಲಿ ಹೆಚ್ಚಿನ ಲೀಡ್ನಲ್ಲಿ ನನ್ನನ್ನು ಗೆಲ್ಲಿಸಿದ್ರಿ. ಈ ಬಾರಿಯೂ ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು” ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದರು.
ಜನರ ಮತ್ತು ಕ್ಷೇತ್ರದ ಅಹವಾಲು ಬಗ್ಗೆ ಕೇಳದೆ,,,, ಕೋಮು ಗಲಭೆ ಎಬ್ಬಿಸಲು ಭಾಷಣಗಳ ಮಾಡುವವರ ಅವಶ್ಯಕತೆ ಇದೆ ಎಂದು ಒಂದು ಜಾಹಿರಾತು ಕೊಡಿ ,, ಹುಡುಕಿಕೊಂಡು ಓಡಿ ಬರುವ ಎಷ್ಟೋ ಜನ ಇದ್ದಾರೆ,,,ಕಳೆದ ಹತ್ತು ವರ್ಷಗಳಲ್ಲಿ ಇದೊಂದು ತುಂಬಾ ಲಾಭದಾಯಕ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ