ಕುಣಿಗಲ್ ಕುದುರೆ ಫಾರಂನಲ್ಲಿ ʼಇಂಟಿಗ್ರೆಟೆಡ್ ಟೌನ್ ಶಿಪ್ʼ ನಿರ್ಮಾಣ ಮಾಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ನಡೆಸಿದೆ. ಸಮಿತಿಯ ಕಾರ್ಯಕರ್ತರು ಕುಣಿಗಲ್ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಕುಣಿಗಲ್ ಸ್ಟಡ್ ಫಾರಂನಲ್ಲಿ ʼಇಂಟಿಗ್ರೆಟೆಡ್ ಟೌನ್ ಶಿಪ್ʼ ನಿರ್ಮಾಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ, ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ರಾಜಕಾರಣಿಗಳು, ನಾಗರೀಕರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಕುದುರೆಯೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಮತ್ತು ಸಂಸದರ, ಶಾಸಕರ ವಿರುದ್ಧ ದಿಕ್ಕಾರ ಕೂಗಿದರು. ವಕೀಲರು ಕಾರ್ಯ, ಕಲಾಪವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಆಮ್ ಆದ್ಮಿ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ʼಇಂಟಿಗ್ರೆಟೆಡ್ ಟೌನ್ ಶಿಪ್ʼ ಕುಣಿಗಲ್ ಭಾವನೆಗೆ ದಕ್ಕೆ ಆಗಿದೆ. 421ಎಕರೆ ಭೂಮಿಯಲ್ಲಿ ಕುದುರೆ ಸ್ಟಡ್ ಫಾರಂ ಕುದುರೆಗಳನ್ನು ಬೆಳೆಸುವುದು ನೂರಾರು ವರ್ಷಗಳಿಂದ ಇದೆ. ಈ ಜಾಗವನ್ನು 1992 ರಲ್ಲಿ ಮಲ್ಯ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೊಡಲಾಗಿತ್ತು. ಗುತ್ತಿಗೆ ಮುಗಿದ ಮೇಲೆ ಬಸವರಾಜ್ ಬೊಮ್ಮಾಯಿ ಸರ್ಕಾರ ಪೂನಾವಾಲ ಅವರಿಗೆ ಗುತ್ತಿಗೆಗೆ ಕೊಟ್ಟಿದ್ದರು.
ಈ ಸರ್ಕಾರ ಬಂದ ಮೇಲೆ ಈ ಗುತ್ತಿಗೆಯನ್ನು ಅವಾನತ್ತಿನಲ್ಲಿಟ್ಟು ʼಇಂಟಿಗ್ರೆಟೆಡ್ ಟೌನ್ ಶಿಪ್ʼ ನಿರ್ಮಾಣ ಮಾಡಲು ಮುಂದಾಗಿದೆ. ಗಂಗರ ಕಾಲದಿಂದಲ್ಲಿ ಯುದ್ದದ ಕುದುರೆಯನ್ನು ವಿಶ್ರಾಂತಿಗೆ ಬಳಸುತಿದ್ದರು. ನಂತರ ಟಿಪ್ಪು ಯುದ್ದದ ಕುದುರೆಗಳನ್ನು ಸಾಕಲು ಬಳಸುತಿದ್ದರು. ನಂತರ ಏಷ್ಯಾದಲ್ಲೆ ಎರಡನೇ ಸ್ಥಾನದಲ್ಲಿ ಕುಣಿಗಲ್ ಸ್ಟಡ್ ಫಾರಂ ಉಳಿದಿದೆ. ಅದನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮ ಜವಬ್ದಾರಿ ಎಂದರು.
ಸ್ಟಡ್ ಫಾರಂನಲ್ಲಿ 421ಎಕರೆ ಭೂಮಿಯಿದ್ದು, ಈ ಭೂಮಿಯನ್ನು ಕಬಳಿಸಲು ಹುನ್ನಾರ ನಡೆದಿದೆ. ಅದು ಯಾರು ಎಂದು ನಿಮಗೆ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಜಾ ಪ್ರಭುತ್ವದ ಹಿನ್ನಲೆಯಲ್ಲಿ ಬಂದವರು. ಹಾಗಾಗಿ ʼಇಂಟಿಗ್ರೆಟೆಡ್ ಟೌನ್ ಶಿಪ್ʼ ನಿರ್ಮಾಣವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕುಣಿಗಲ್ ಕುದುರೆ ಫಾರಂ ಉಳಿವಿಗಾಗಿ ಹೋರಾಟ ಸಮಿತಿಯ ಜಿ.ಕೆ. ನಾಗಣ್ಣ, ಬೇಗೂರು ಹುಚ್ಚೇಗೌಡ, ಕೆಂಪೀರೇಗೌಡ, ವಿ.ಶಿವಶಂಕರ್, ಅಬ್ದುಲ್‌ಮುನಾಫ್, ಆನಂದ್‌ಪಟೇಲ್, ರಘುಜಾಣಗೆರೆ ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸು, ಮಾಜಿ ಸಚಿವೆ ಬಿ.ಟಿ. ಲಲಿತಾನಾಯ್ಕ್, ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಸಾಹಿತಿ ತಲಕಾಡು ಚಿಕ್ಕರಂಗೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಎನ್.ಆರ್.ಲಕ್ಷ್ಮಣನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಡಿ. ರಾಜೇಶ್‌ಗೌಡ, ಮಂಡಲ ಅಧ್ಯಕ್ಷ ಕೆ.ಎಸ್. ಬಲರಾಮ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ವಕೀಲ ಸಂಘದ ಅಧ್ಯಕ್ಷ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್. ಹರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.