ಕಳೆದ ಒಂದು ವರ್ಷದಿಂದ ಬಂಧನದಲ್ಲಿದ್ದ ಬಿಲ್ಡರ್‌ವೊಬ್ಬರು ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಕ್ಕೆ, ಮತ್ತೆ ಅಪಹರಿಸಿ ಅವರಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರುಕುಳ ನೀಡಿದ್ದ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶೋಕ್ ಶಿವರಾಜ್ ಎಂಬುವವರು ಹಲವು ವರ್ಷಗಳಿಂದ ಬಿಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯವಹಾರದಲ್ಲಿ ಕುಸಿತ ಕಂಡ ಹಿನ್ನೆಲೆ, ವೀರೇಶ್ ಮತ್ತು ರಶ್ಮಿ ಎಂಬುವವರು ಪರಿಚಯವಾಗಿ ಪಾರ್ಟ್ನರ್ ಆಗಿ ಜೊತೆಗೆ ಕಾರ್ಯನಿರ್ವಹಿಸುತ್ತಾರೆ.
ಅಶೋಕ್ ಶಿವರಾಜ್ ಅವರ ಬಳಿ ಇದ್ದ ಆಸ್ತಿಗೆ ಮಾರು ಹೋದ ವೀರೇಶ್ ಮತ್ತು ರಶ್ನಿ ಅವರ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿ, ಅಶೋಕ್ ಶಿವರಾಜ್ ಅವರನ್ನು ಕಳೆದ ಒಂದು ವರ್ಷದಿಂದ ಬಂಧನದಲ್ಲಿರಿಸಿ, ಅವರಿಂದ ಬಲವಂತವಾಗಿ ಜಮೀನು, ಫ್ಲಾಟ್ ಸೇರಿದಂತೆ ಕೆಲವು ಆಸ್ತಿಗಳಿಗೆ ಸಹಿ ಹಾಕಿಸಿಕೊಂಡು ಕಬಳಿಸಿರುವ ಆರೋಪ ಕೇಳಿಬಂದಿದೆ.
ಆರೋಪಿಗಳ ಬಂಧನದಿಂದ ತಪ್ಪಿಸಿಕೊಂಡು ಬಂದ ಅಶೋಕ್ ಶಿವರಾಜ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಆರೋಪಿಸಿದ್ದಕ್ಕೆ ಮತ್ತೆ ಆರೋಪಿಗಳು ಜನವರಿ 12 ರಂದು ಜ್ಞಾನಭಾರತಿ ಸಮುದಾಯ ಭವನ ಬಳಿಯಿಂದ ಅಶೋಕ್ ಶಿವರಾಜ್ ಅವರನ್ನು ಅಪಹರಣ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸಂಬಂಧಿ ಉಷಾ ಎಂಬುವವರು ನಿರಂತರ ಕರೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಕರೆ ಮಾಡಿದ ಬಳಿಕ ಅಶೋಕ್ ಶಿವರಾಜ್ ಅವರನ್ನು ವಾಪಸ್ ಬಿಟ್ಟು ಹೋಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಶ್, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ರಘು ಸೇರಿ 8 ಜನರ ವಿರುದ್ಧ ದೂರು ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಜ.19ರಂದು ಪ್ರಧಾನಿ ಮೋದಿ ಆಗಮನ; ಸಂಚಾರ ಮಾರ್ಗ ಬದಲಾವಣೆಯ ವಿವರ ಇಲ್ಲಿದೆ
ಈ ಎಂಟು ಜನ ಆರೋಪಿಗಳು ಅಶೋಕ್ ಅವರನ್ನು ಒಂದು ವರ್ಷ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದರು ಎಂದು ಅಶೋಕ್ ಶಿವರಾಜ್ ಅವರು ಆರೋಪಿಸಿದ್ದಾರೆ.
ಇನ್ನು ಅಶೋಕ್ ಶಿವರಾಜ್ ವಿರುದ್ಧವೂ ನಗರದ ನಾನಾ ಪೊಲೀಸ್ ಠಾಣೆಯಲ್ಲಿ ಹಲವು ವಂಚನೆ ಪ್ರಕರಣಗಳಿದ್ದು, ಎಫ್ಐಆರ್ ದಾಖಲಾಗಿರುವುದು ಪತ್ತೆಯಾಗಿದೆ.