ಕಾನ್ಪುರದ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಐಐಟಿ) ಕಾಲೇಜಿನಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಓದುತ್ತಿದ್ದ ಜಾರ್ಖಂಡ್‌ನ ದುಮ್ಕಾ ಮೂಲದ ಪ್ರಿಯಾಂಕಾ ಜೈಸ್ವಾಲ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಒಂದು ತಿಂಗಳಲ್ಲಿ ಕಾನ್ಪುರ ಐಐಟಿ ಕ್ಯಾಂಪಸ್‌ನಲ್ಲಿ ನಡೆದ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಪ್ರಿಯಾಂಕಾ ಅವರು ಕಳೆದ ವರ್ಷ ಡಿಸೆಂಬರ್ 29 ರಂದು ಸಂಸ್ಥೆಗೆ ಪ್ರವೇಶ ಪಡೆದಿದ್ದರು ಎಂದು ತಿಳಿದುಬಂದಿದೆ. ಸಂಸ್ಥೆಗೆ ಸೇರಿದ 20 ದಿನಗಳಲ್ಲಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆತ್ಮಹತ್ಯೆಯ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಅವರ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲನ್ನು ಒಡೆದು ಪರಿಶೀಲಿಸಿದಾಗ, ಅವರು ಮೃತಪಟ್ಟಿರುವುದು ಕಂಡುಬಂದಿತು” ಎಂದು ಕಾನ್ಪುರ ಹೆಚ್ಚುವರಿ ಡಿಸಿಪಿ ಆಕಾಶ್ ಪಟೇಲ್ ತಿಳಿಸಿದ್ದಾರೆ.
“ಫೋರೆನ್ಸಿಕ್ ತಂಡವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಪ್ರಾಥಮಿಕ ತನಿಖೆ ಮತ್ತು ಇತರ ವಿವರಗಳನ್ನು ಪಡೆದ ಬಳಿಕ ಆಕೆಯ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಬಹುದು” ಎಂದು ಅವರು ಹೇಳಿದ್ದಾರೆ.
“2023ರ ಡಿಸೆಂಬರ್‌ನಲ್ಲಿ ಸಂಸ್ಥೆಗೆ ಪ್ರವೇಶ ಪಡೆದಿದ್ದ ಪ್ರಿಯಾಂಕಾ ಅವರ ಅಕಾಲಿಕ ಮತ್ತು ದುರದೃಷ್ಟಕರ ಸಾವು ತೀವ್ರ ದುಃಖ ತಂದಿದೆ. ಕಾನ್ಪುರ ಐಐಟಿ ಸಂತಾಪ ವ್ಯಕ್ತಪಡಿಸುತ್ತದೆ. ಆಕೆಯ ಸಾವಿಗೆ ಸಂಭವನೀಯ ಕಾರಣವೇನು ಎಂದು ತಿಳಿಯಲು ಸಂಸ್ಥೆಯು ಪೊಲೀಸ್ ತನಿಖೆಗಾಗಿ ಕಾಯುತ್ತಿದೆ. ಆಕೆಯ ಸಾವಿನಿಂದ ಸಂಸ್ಥೆಯು ಭರವಸೆಯ ಯುವ ವಿದ್ಯಾರ್ಥಿಯನ್ನು ಕಳೆದುಕೊಂಡಿದೆ” ಎಂದು ಕಾನ್ಪುರ ಐಐಟಿ ಹೇಳಿದೆ.
ಜನವರಿ 11 ರಂದು, ಇನ್ಸ್ಟಿಟ್ಯೂಟ್‌ನ ಎರಡನೇ ವರ್ಷದ ಎಂ.ಟೆಕ್ ವಿದ್ಯಾರ್ಥಿ ವಿಕಾಸ್ ಕುಮಾರ್ ಮೀನಾ (31) ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ ತನ್ನ ಕೋರ್ಸ್‌ನಲ್ಲಿ ಮುಂದುವರೆಯುವುದನ್ನು ‘ತಾತ್ಕಾಲಿಕವಾಗಿ’ ನಿರ್ಬಂಧಿಸಲಾಗಿತ್ತು ಎಂದು ಹೇಳಲಾಗಿದೆ.
ಅದಕ್ಕೂ ಹಿಂದೆ, ಡಿಸೆಂಬರ್ 19 ರಂದು, ಪೋಸ್ಟ್‌ಡಾಕ್ಟರಲ್ ಸಂಶೋಧಕಿ ಪಲ್ಲವಿ ಚಿಲ್ಕಾ (34) ಅವರು ಕ್ಯಾಂಪಸ್ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.