ಮುಖ್ಯಮಂತ್ರಿ ಅವಧಿ ಕುರಿತ ಕಚ್ಚಾಟ ಕೆಲಕಾಲ ತಣ್ಣಗಾಗಿತ್ತು. ಈ ಸಲ ಅದನ್ನು ಕೆಣಕಿ ಕದಲಿಸಿರುವವರು ಖುದ್ದು ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ. ಗಂಭೀರ ಸ್ವಭಾವದ ಯತೀಂದ್ರ ಅವರ ಈ ನಡೆ ಅನಿರೀಕ್ಷಿತ ಮತ್ತು ಅಷ್ಟೇ ಅನಪೇಕ್ಷಿತ
ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭೆಯ ಇತ್ತೀಚಿನ ಚುನಾವಣೆಯಲ್ಲಿ ಶಕ್ತಿಮೀರಿ ತಿಣುಕಿದರು. ಆದರೂ ಬಿಜೆಪಿಯನ್ನು ಭಾರೀ ಸೋಲಿನಿಂದ ಬಚಾವು ಮಾಡದೆ ಹೋದರು. ಪ್ರಧಾನಿಯ ಪರಾಭವದ ಈ ಭವಿಷ್ಯವನ್ನು ಕರಾರುವಾಕ್ಕಾಗಿ ಹೇಳಿದ್ದ ದೇಶದ ಏಕೈಕ ಸುದ್ದಿ ಸಂಸ್ಥೆ ‘ಈ ದಿನ.ಕಾಂ’. ಉಳಿದೆಲ್ಲ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಗೆಲುವಿನ ನಾಡಿ ಹಿಡಿಯುವಲ್ಲಿ ಶೋಚನೀಯವಾಗಿ ಸೋತಿದ್ದವು. ಬಹುತೇಕ ಸರ್ವೆಗಳು ಬಿಜೆಪಿ ತೇಲಿ ಬಿಟ್ಟಿದ್ದ ‘ತ್ರಿಶಂಕು ವಿಧಾನಸಭೆ’ಯ ಸುಳ್ಳಿಗೆ ಧ್ವನಿವರ್ಧಕ ಹಿಡಿದಿದ್ದವು.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಪುನಃ ಅತಿ ಹೆಚ್ಚಿನ ಸೀಟುಗಳನ್ನು ಗೆಲ್ಲುವುದು ಮೋದಿ ಮತ್ತು ಅಮಿತ್ ಶಾ ಗುರಿಯಾಗಿತ್ತು. ಈ ದಿಸೆಯಲ್ಲಿ ವಿಧಾನಸಭಾ ಚುನಾವಣೆಗೆ ಸಮರತಂತ್ರ ಹೆಣೆದಿದ್ದರು. ಮೋದಿಯೇ ಮುಖ್ಯಮಂತ್ರಿ ಎನ್ನುವ ಹಂತಕ್ಕೆ ಅವರನ್ನು ಮೆರೆಯಿಸಲಾಯಿತು. ಕನ್ನಡಿಗರು ಈ ಮೋಡಿಗೆ ಮರುಳಾಗಲಿಲ್ಲ. ಮೋದಿ ಮತ್ತು ಅವರ ಪಕ್ಷವನ್ನು ತಿರಸ್ಕರಿಸಿದರು. ಆದರೆ ಜನಾದೇಶವನ್ನು ಸೋಲಿಸುವಲ್ಲಿ ಬಿಜೆಪಿಗೆ ಯಾವ ಅಂಕೆ—ಶಂಕೆಯೂ ಇಲ್ಲ. ನೈತಿಕ-ಅನೈತಿಕದ ಪ್ರಶ್ನೆ ಅದನ್ನು ಎಂದೂ ಕಾಡಿಲ್ಲ. ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬ ಗಾದೆಗೆ ಮೋದಿ-ಶಾ ಜೋಡಿ ಎಂದೆಂದೂ ಮೋಸ ಮಾಡಿಲ್ಲ.
ಬಿಜೆಪಿಯೇತರ ಸರ್ಕಾರಗಳನ್ನು ‘ಏನು ಬೇಕಾದರೂ ಮಾಡಿ’ ಉರುಳಿಸುವ ಮೋದಿ ಮತ್ತು ‘ಗೋದಿ’ ಪ್ರಯತ್ನಗಳು ಮತ್ತು ಫಲಿತಾಂಶಗಳು ಈಗಾಗಲೇ ಕುಖ್ಯಾತ. ಕುಟಿಲ ಕಾರಸ್ಥಾನಗಳು- ದುಷ್ಟ ಕಾರ್ಯತಂತ್ರಗಳನ್ನು ಚಾಣಕ್ಯತಂತ್ರವೆಂದು ಕರೆದು ಕೊಂಡಾಡಲಾಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದು ವರ್ಷ ಕೂಡ ತುಂಬಿಲ್ಲ. ಪ್ರತಿಪಕ್ಷ ಬಿಜೆಪಿ ಇನ್ನೂ ತನ್ನ ಸೋಲಿನ ಗಾಯಗಳನ್ನು ನೆಕ್ಕಿಕೊಳ್ಳುವುದು ನಿಂತಿಲ್ಲ. ಸೋತರೇನಂತೆ, ಮೋದಿ- ಶಾ ಜೋಡಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯ ಎಂಬ ಕಾಂಗ್ರೆಸ್ ಹಸ್ತದಿಂದಲೇ ಕೈ ಸರ್ಕಾರದ ಕುತ್ತಿಗೆ ಹಿಸುಕಿದ್ದರು. ಮಹಾರಾಷ್ಟ್ರದಲ್ಲಿ ಮಾಜಿ ಮಿತ್ರಪಕ್ಷ ಶಿವಸೇನೆಯನ್ನು ಒಡೆದು ಸೇಡು ತೀರಿಸಿಕೊಂಡರು. ಅಕ್ರಮ ಮತ್ತು ಅನೈತಿಕ ಸರ್ಕಾರವನ್ನು ಎಬ್ಬಿಸಿ ನಿಲ್ಲಿಸಿದರು. ಜನತಂತ್ರದ ತೋಳು ತಿರುಚುವ ಈ ಅನ್ಯಾಯವನ್ನು ಸರಿಪಡಿಸುವಲ್ಲಿ ನ್ಯಾಯಲಯ ಕೂಡ ಕೈ ಚೆಲ್ಲಿತು.
ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರದ ಬುಡಮೇಲು ಯತ್ನಗಳು ನಿತ್ಯ ನಿರಂತರ ಜಾರಿಯಲ್ಲಿವೆ. ಅವು ಮೇಲುನೋಟಕ್ಕೆ ಕಾಣದಿರಬಹುದು. ಬಿರುಗಾಳಿಗೆ ಮುನ್ನಿನ ಮೌನವನ್ನು ಮುಂದಾಗಿ ಅರಿಯುವವರೇ ಜಾಣರು. ಅರಿತೂ ಮೈಮರೆವವರು ಮೂರ್ಖರು.
ಅಂದುಕೊಂಡ ಕೆಲಸವನ್ನು ಆಗು ಮಾಡಲು ದಾರಿ ಯಾವುದಾದರೂ ಸರಿ. ಧನಬಲ, ಬಾಹುಬಲ, ಆಮಿಷ, ಬೆದರಿಕೆ, ಬ್ಲ್ಯಾಕ್ ಮೇಲ್, ಯಾವುದೂ ನಿಷಿದ್ಧವಲ್ಲ ಮೋದಿಯವರಿಗೆ. ಸಿಬಿಐ, ಇ.ಡಿ, ಐ.ಟಿ. ದಾಳಿಗಳು, ರಾಜ್ಯಪಾಲರೂ ಸೇರಿದಂತೆ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳು ಕೂಡ ಪ್ರತಿಸ್ಪರ್ಧಿಗಳನ್ನು ಉರುಳಿಸುವ ದಾಳಗಳು. ಕಾಂಗ್ರೆಸ್ ತೊರೆದು ಬರುವ ಶಾಸಕರಿಗೆ ಮಂತ್ರಿ ಹುದ್ದೆ ಮತ್ತು ಹತ್ತಾರು ಕೋಟಿ ರುಪಾಯಿಗಳ ಆಮಿಷವನ್ನು ಬಿಜೆಪಿ ಒಡ್ಡಿದ ಸಂಗತಿಯನ್ನು ಕೈ ಶಾಸಕ ರವಿಕುಮಾರ್ ಗೌಡ ಇತ್ತೀಚೆಗೆ ಬಯಲು ಮಾಡಿದ್ದುಂಟು. ಈ ಹಿಂದೆ ಕಾಂಗ್ರೆಸ್- ಜೆ.ಡಿ.ಎಸ್. ಮೈತ್ರಿ ಸರ್ಕಾರದಿಂದ ಹೊರಬಿದ್ದವರಿಗೆ ಇಂತಹುದೇ ಬಹುಮಾನಗಳು ದೊರೆತದ್ದುಂಟು.
ರಾಜ್ಯ ಕಾಂಗ್ರೆಸ್ಸಿನ ಕಟ್ಟಾಳು ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಬಾಚಿಕೊಳ್ಳುವುದು ಮೋದಿಯವರ ಹಳೆಯ ಕಾರ್ಯಸೂಚಿ. ಇನ್ನೂ ಕೈಗೂಡಿಲ್ಲ. ಆದರೆ ಪ್ರಯತ್ನ ನಿಂತಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವೀ ಮಂತ್ರಿಯೊಬ್ಬರು ಕೇಂದ್ರ ಸರ್ಕಾರದ ಏಜೆನ್ಸಿಗಳು ತಮ್ಮ ಮೇಲೆ ಎಸೆದಿರುವ ಕೇಸುಗಳ ಬಲೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರಲಿದ್ದಾರೆಂದು ಜೆ.ಡಿ.ಎಸ್. ತಲೆಯಾಳು ಎಚ್.ಡಿ.ಕುಮಾರಸ್ವಾಮಿ ತಿಂಗಳೊಪ್ಪತ್ತಿನ ಹಿಂದೆ ಹೇಳಿದ್ದರು. ಲೋಕಸಭಾ ಚುನಾವಣೆಗಳ ನಂತರ ನಡೆಯಲಿರುವ ಈ ವಿದ್ಯಮಾನ ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲಿದೆ. ಈ ಪ್ರಭಾವಿಯು 50-60 ಕಾಂಗ್ರೆಸ್ ಶಾಸಕರನ್ನು ತಮ್ಮೊಂದಿಗೆ ಬಿಜೆಪಿಗೆ ಕರೆದೊಯ್ಯಲಿದ್ದಾರೆ ಎಂಬುದು ಅವರ ಭವಿಷ್ಯವಾಣಿ.
ಬಿಜೆಪಿಯ ಮಾಜಿ ಮಂತ್ರಿ ಮುರುಗೇಶ್ ನಿರಾಣಿ ಕೂಡ ಜೆ.ಡಿ.ಎಸ್.ನಾಯಕನೊಂದಿಗೆ ದನಿಗೂಡಿಸಿದ್ದರು.
ಈ ಎಲ್ಲ ಹುನ್ನಾರಗಳು ಕಾಂಗ್ರೆಸ್ ಪಕ್ಷಕ್ಕೆ, ಅದರ ನಾಯಕಮಣಿಗಳಿಗೆ ಅಪರಿಚಿತವೇನೂ ಅಲ್ಲ. ಆದರೂ ಈ ಪಕ್ಷ ಪಾಠ ಕಲಿತಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಕಾಂಗ್ರೆಸ್ ಪ್ರವೃತ್ತಿಗೆ ಕೊನೆ ಮೊದಲೇ ಇಲ್ಲ.
ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಬಹಿರಂಗ ಕಾಳಗವೇ ನಡೆದು ಹೋಯಿತು. ಇಬ್ಬರೂ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೊಳ್ಳುವ ಮಾತುಗಳು ಶಿವಕುಮಾರ್ ಪಾಳೆಯದಿಂದ ಕೇಳಿ ಬಂದವು. ತಮ್ಮ ನಾಯಕನೇ ಐದು ವರ್ಷದ ಉದ್ದಕ್ಕೂ ಮುಖ್ಯಮಂತ್ರಿ ಎಂಬುದು ಸಿದ್ದು ಶಿಬಿರದ ವಾದ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಆಳುವ ಪಕ್ಷದಲ್ಲೇ ವಿಪರೀತ ವಾಗ್ವಾದಗಳು.
ಮುಖ್ಯಮಂತ್ರಿ ಅವಧಿ ಕುರಿತ ಕಚ್ಚಾಟ ಕೆಲಕಾಲ ತಣ್ಣಗಾಗಿತ್ತು. ಈ ಸಲ ಅದನ್ನು ಕೆಣಕಿ ಕದಲಿಸಿರುವವರು ಖುದ್ದು ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ. ಗಂಭೀರ ಸ್ವಭಾವದ ಯತೀಂದ್ರ ಅವರ ಈ ನಡೆ ಅನಿರೀಕ್ಷಿತ ಮತ್ತು ಅಷ್ಟೇ ಅನಪೇಕ್ಷಿತ. ಲೋಕಸಭಾ ಚುನಾವಣೆಗಳು ಕದ ಬಡಿದಿರುವ ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಏಕವ್ಯಕ್ತಿಯಾಗಿ ಎದ್ದು ನಿಂತು ಬಿಜೆಪಿಯನ್ನು ಎದುರಿಸಬೇಕಿತ್ತು.
ಈ ನಿಟ್ಟಿನಲ್ಲಿ ಕೈ ಪಕ್ಷ ಇರಿಸಿದ್ದ ಆರಂಭಿಕ ಹೆಜ್ಜೆಗಳು ಅಭಿನಂದನೀಯ ಎನಿಸಿದ್ದವು. ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬರೆಗಳಿಂದ ಬಸವಳಿದಿದ್ದ ಜನತೆಗೆ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳು ಹೊಸ ಉಸಿರು ತುಂಬಿದ್ದವು.
ಇದೇ ದಾರಿಯಲ್ಲಿ ದಾಪುಗಾಲು ಇಡಬೇಕಿದ್ದ ಕಾಂಗ್ರೆಸ್ ಪಕ್ಷ ಒಳಜಗಳಗಳಿಂದ ಮುಗ್ಗರಿಸತೊಡಗಿದೆ. ಬಿಜೆಪಿ ಎಸೆದ ಬಲೆಯನ್ನು ಕೈಯಾರೆ ಎತ್ತಿಕೊಂಡು ಹೊದ್ದುಕೊಳ್ಳುತ್ತಿದೆ. ಆತ್ಮಹತ್ಯೆಯ ಐತಿಹಾಸಿಕ ಉರುಳಿಗೆ ಮತ್ತೆ ಮತ್ತೆ ಕೊರಳು ಒಡ್ಡತೊಡಗಿದೆ. ಜನದ್ರೋಹದ ನಡೆಯಿದು.
